ಬೆಂಗಳೂರು: ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಶಾಸಕ ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ಪ್ರಕಟಿಸಿದೆ.
ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ 15ನೇ ಆರೋಪಿ ಆಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದೆ. ಇದೀಗ ಈ ಸಂಬಂಧ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆಯನ್ನು ಪ್ರಕಟಿಸಿದೆ. ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ನೀಡಿದೆ.
2016ರ ಜೂನ್ 15ರಂದು ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು ಸಪ್ತಾಪುರ ಬಡಾವಣೆಯ ಜಿಮ್ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆಯಾದ ಯೋಗೇಶ್ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂದು ಹೇಳಿತ್ತು.
ಈ ಕೊಲೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಕೈವಾಡವಿರುವ ಅನುಮಾನ ವ್ಯಕ್ತವಾಗಿತ್ತು. 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇದರ ನಂತರ ವಿನಯ್ ಕುಲಕರ್ಣಿ ಜಾಮೀನು ಪಡೆದು ಹೊರಗೆ ಬಂದಿದ್ದರು. ನಂತರದಲ್ಲಿ ಈ ಪ್ರಕರಣವನ್ನು ಜನಪ್ರತಿನಿಧಿ ಕೋರ್ಟ್ಗೆ ನೀಡಲಾಗಿತ್ತು, ಇದೀಗ ಈ ಅವರಿಗೆ ಶಿಕ್ಷೆಯನ್ನು ಘೋಷಣೆ ಮಾಡಿದೆ.
