ಕಾರವಾರ : ಸುಮಾರು ಒಂದು ತಿಂಗಳಿನಿಂದ ಸ್ತಬ್ಧವಾಗಿದ್ದ ವಾಣಿಜ್ಯ ಚಟುವಟಿಕೆಗೆ ಮತ್ತೆ ಚೈತನ್ಯ ಸಿಕ್ಕಿದ್ದು, 35 ದಿನಗಳ ಬಳಿಕ ಬಿಟುಮಿನ್ ಹೊತ್ತ ಹಡಗು ಕಾರವಾರ ವಾಣಿಜ್ಯ ಬಂದರು ತಲುಪಿದೆ.
ಎಮ್.ಎಸ್.ಜಿ (MSG) ಎಂಬ ಹಡಗು 6200 ಮೆಟ್ರಿಕ್ ಟನ್ ಬಿಟುಮಿನ್ ಸಾಗಿಸಿ ಶಾರ್ಜಾ ಬಂದರಿನಿಂದ ಹೊರಟು ಹಾರ್ಮೊಜ್ ಜಲಸಂಧಿ ದಾಟಿ ಕಾರವಾರ ಬಂದರು ತಲುಪಿದೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಸಂಘರ್ಷದ ಪರಿಣಾಮವಾಗಿ ಕರ್ನಾಟಕದ ಬಂದರುಗಳ ವಾಣಿಜ್ಯ ಚಟುವಟಿಕೆ ಕಳೆದ ಒಂದು ತಿಂಗಳಿನಿಂದ ತೀವ್ರವಾಗಿ ಕುಂಠಿತಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಎಮ್.ಎಸ್.ಜಿ ಹಡಗಿನ ಆಗಮನ ಬಂದರು ವಲಯದಲ್ಲಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತಂದಿದೆ. ಗಲ್ಪ್ ದೇಶದಿಂದ ಹಡಗು ಬಂದಿರುವುದರಿಂದ ವ್ಯಾಪಾರ ವಹಿವಾಟು ಪುನಃ ಗರಿಗೆದರಲು ಪ್ರಾರಂಭವಾಗಿದೆ.
ಸ್ಥಳೀಯ ವ್ಯಾಪಾರಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಇನ್ನಷ್ಟು ಹಡಗುಗಳು ಬಂದರು ತಲುಪುವ ನಿರೀಕ್ಷೆ ಇದ್ದು, ವಾಣಿಜ್ಯ ಚಟುವಟಿಕೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ.
