ಉತ್ತರ ಕನ್ನಡದ ಗುತ್ತಿಗೆದಾರರಿಗೆ ₹385 ಕೋಟಿ ಬಾಕಿ; ಹೊರಜಿಲ್ಲೆಯವರಿಗೆ ಹಣ ಬಿಡುಗಡೆ ಮಾಡಿದ್ದಕ್ಕೆ ಆಕ್ರೋಶ
ಹಳಿಯಾಳ: ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ ಬಾಕಿ ಬಿಲ್ ಪಾವತಿಯಾಗದೆ ಸಂಕಷ್ಟ ಎದುರಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಗುತ್ತಿಗೆದಾರರು, ಹಣ ಬಿಡುಗಡೆ ಮಾಡುವಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ಹಳಿಯಾಳದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಉತ್ತರ ಕನ್ನಡ ಜಿಲ್ಲಾ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಗುತ್ತಿಗೆದಾರರು ಹಳಿಯಾಳ ಚಲೋ ನಡೆಸಿ ಇಲಾಖೆಯ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಗುತ್ತಿಗೆದಾರರಿಗೆ ಸುಮಾರು ₹385 ಕೋಟಿ ಮೊತ್ತದ ಬಿಲ್ ಬಾಕಿ ಉಳಿದಿದ್ದು, ಇತ್ತೀಚೆಗೆ ಬಿಡುಗಡೆಯಾದ ಅನುದಾನವನ್ನು ಹೊರ ಜಿಲ್ಲೆಗಳ ಗುತ್ತಿಗೆದಾರರಿಗೆ, ಅದರಲ್ಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸರ್ಕಾರದಿಂದ ಬಿಡುಗಡೆಯಾಗುವ ಎಲ್ಒಸಿ ಹಣ ಹಂಚಿಕೆ ಸಂದರ್ಭದಲ್ಲಿ ಪ್ರತಿ ಬಾರಿಯೂ ಸ್ಥಳೀಯ ಗುತ್ತಿಗೆದಾರರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಅವರ ಪ್ರಮುಖ ಆರೋಪವಾಗಿತ್ತು. ಕಳೆದ ಮಾರ್ಚ್ನಿಂದ ಕಾಮಗಾರಿಗಳಿಗಾಗಿ ತಾವು ಹೂಡಿಕೆ ಮಾಡಿದ ಹಣ ಕೈ ಸೇರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದರೂ ಬಿಲ್ ಪಾವತಿಯಾಗದಿರುವುದರಿಂದ ಕುಟುಂಬ ನಿರ್ವಹಣೆಗೂ ತೊಂದರೆಯಾಗುತ್ತಿದೆ ಎಂದು ಗುತ್ತಿಗೆದಾರರು ತಮ್ಮ ಅಳಲು ತೋಡಿಕೊಂಡರು.
ಗುತ್ತಿಗೆದಾರರ ಸಂಘದ ಸದಸ್ಯ ಪ್ರಶಾಂತ ನಾಯಕ ಮಾತನಾಡಿ, ಸರ್ಕಾರದಿಂದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದಲೂ ಅನೇಕ ಕಾಮಗಾರಿಗಳ ಬಿಲ್ಗಳು ಬಾಕಿ ಉಳಿದಿವೆ. ಈ ಬಾರಿ ಬಿಡುಗಡೆಯಾದ ₹9 ಕೋಟಿ ಮೊತ್ತದ ಎಲ್ಒಸಿ ಹಂಚಿಕೆ ಮಾಡುವಾಗಲೇ ನಿರ್ದಿಷ್ಟ ಗುತ್ತಿಗೆದಾರರಿಗೆ ಹಣ ಪಾವತಿಸುವಂತೆ ನಮೂದಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ ಎಂದು ತಿಳಿಸಿದರು.
ಹೊರ ಜಿಲ್ಲೆಗಳ ಕೆಲವು ಪ್ರಭಾವಿ ಗುತ್ತಿಗೆದಾರರು ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತಂದು ತಮ್ಮ ಕಾಮಗಾರಿಗಳ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಗುತ್ತಿಗೆದಾರರ ಹಿತಾಸಕ್ತಿಯನ್ನು ರಕ್ಷಿಸುವವರು ಯಾರು ಎಂದು ಅವರು ಪ್ರಶ್ನಿಸಿದರು.
ಸಂಘದ ಮಾಜಿ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಗುತ್ತಿಗೆದಾರರು ಮತ್ತು ಹೊರ ಜಿಲ್ಲೆಗಳ ಗುತ್ತಿಗೆದಾರರ ನಡುವೆ ಇಲಾಖೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಲಂಚ ನೀಡಿದವರಿಗೆ ಮಾತ್ರ ಹಣ ಬಿಡುಗಡೆಯಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದರು. ಅನುಭವವಿಲ್ಲದವರು ಬೃಹತ್ ಕಾಮಗಾರಿಗಳನ್ನು ನಿರ್ವಹಿಸುತ್ತಿರುವುದು ಹಾಗೂ ಕೆಲವರು ನಕಲಿ ದಾಖಲೆಗಳನ್ನು ನೀಡಿ ಗುತ್ತಿಗೆ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಹಲವು ಉದಾಹರಣೆಗಳಿವೆ ಎಂದು ದೂರಿದರು. ಈ ಕುರಿತು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಗುತ್ತಿಗೆದಾರರು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಮಾರುತಿ ಗೋಕಾಕ್ ಅವರಿಗೆ ಸಲ್ಲಿಸಿದರು. ಜಿಲ್ಲೆಯ ಗುತ್ತಿಗೆದಾರರಿಗೆ ನ್ಯಾಯಯುತವಾಗಿ ಬಾಕಿ ಹಣ ಪಾವತಿಸುವ ಮೂಲಕ ತಾರತಮ್ಯಕ್ಕೆ ತೆರೆ ಎಳೆದು ಅವರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕುಮಟಾದ ಪ್ರಶಾಂತ ಪಿ. ನಾಯ್ಕ, ಸಿದ್ದಾಪುರದ ಸತೀಶ ಗೌಡ, ಜಯ ಶೆಟ್ಟಿ, ರಿಚರ್ಡ್ ಡಯಾಸ್, ರಾಘವೇಂದ್ರ ಶೆಟ್ಟಿ, ಕಿರಣ್ ಶೆಟ್ಟಣ್ಣನವರ್, ನಾಗೇಶ್ ನಾಯ್ಕ ಕಲಭಾಗ, ಗಜಾನನ ಗುನಗಾ, ಗಣೇಶ ನಾಯ್ಕ, ಸುಧೀರ ಪಂಡಿತ್, ದಾಮೋದರ ನಾಯ್ಕ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಗುತ್ತಿಗೆದಾರರು ಭಾಗವಹಿಸಿದ್ದರು.
