ಕಾರವಾರ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಮತದಾನ ಆರಂಭವಾಗಿದ್ದು, ಮೊದಲ ಎರಡು ಗಂಟೆಗಳಲ್ಲಿ ಶೇ.10.82ರಷ್ಟು ಮತದಾನ ದಾಖಲಾಗಿದೆ. ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸರದಿಯಲ್ಲಿ ನಿಂತು ಮತ ಚಲಾಯಿಸುವ ಮೂಲಕ ಗಮನ ಸೆಳೆದರು. ಇದೇ ವೇಳೆ, ಅರ್ಹ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿಲ್ಲೆಯಾದ್ಯಂತ ಒಟ್ಟು 25 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, 16,039 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ 1,735 ಮಂದಿ ಮತ ಚಲಾಯಿಸಿದ್ದು, ಇವರಲ್ಲಿ 987 ಪುರುಷರು ಹಾಗೂ 748 ಮಹಿಳೆಯರು ಸೇರಿದ್ದಾರೆ. ಈ ಮೂಲಕ ಜಿಲ್ಲೆಯ ಮತದಾನ ಪ್ರಮಾಣ ಶೇ.10.82ರಷ್ಟಾಗಿದೆ.
ಕಾರವಾರದ ಮತಗಟ್ಟೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಅವರು ಇತರ ಮತದಾರರೊಂದಿಗೆ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಚುನಾವಣೆಗೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ 23 ಸಾಮಾನ್ಯ ಮತಗಟ್ಟೆಗಳ ಜೊತೆಗೆ ಹೆಚ್ಚಿನ ಸಂಖ್ಯೆಯ ಮತದಾರರಿರುವ ಎರಡು ಸ್ಥಳಗಳಲ್ಲಿ ಹೆಚ್ಚುವರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿಯೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದು, ಮತದಾರರಿಗೆ ನೆರವಾಗಲು ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮತದಾರರು ತಮ್ಮ ಗುರುತಿನ ಚೀಟಿ ಹಾಗೂ ಮತದಾರರ ಸ್ಲಿಪ್ನೊಂದಿಗೆ ಮತಗಟ್ಟೆಗೆ ಆಗಮಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವುದು ಹಾಗೂ ಸ್ಲಿಪ್ ವಿತರಿಸುವ ಕಾರ್ಯಕ್ಕೆ ಬಿಎಲ್ಒಗಳನ್ನು ನಿಯೋಜಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳು ಮತದಾನ ಪ್ರಕ್ರಿಯೆ ಕುರಿತು ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಮತದಾನ ಮುಕ್ತಾಯವಾದ ಬಳಿಕ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿ, ಮತದಾನಕ್ಕೆ ಸಂಬಂಧಿಸಿದ ನಮೂನೆಗಳನ್ನು ಕ್ರಮಬದ್ಧವಾಗಿ ಜೋಡಿಸುವ ಡಿಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಬಳಿಕ ಕರಾವಳಿ ಭಾಗದ ಮತಗಟ್ಟೆಗಳ ಮತಪೆಟ್ಟಿಗೆಗಳನ್ನು ಅಂಕೋಲಾದಲ್ಲಿ ಒಟ್ಟುಗೂಡಿಸಿ ಧಾರವಾಡಕ್ಕೆ ಸಾಗಿಸಲಾಗುತ್ತದೆ. ಘಟ್ಟದ ಮೇಲಿನ ಭಾಗದ ಮತಪೆಟ್ಟಿಗೆಗಳನ್ನು ಯಲ್ಲಾಪುರದಲ್ಲಿ ಸಂಗ್ರಹಿಸಿ ಅಲ್ಲಿಂದ ಧಾರವಾಡಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ವಿವರಿಸಿದರು.
ಇನ್ನು ಚುನಾವಣಾ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್ಕಾಸ್ಟಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಕೇಂದ್ರಕ್ಕೆ ಭೇಟಿ ನೀಡಿ, ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯ ವೀಕ್ಷಣೆ ಮತ್ತು ಮೇಲ್ವಿಚಾರಣೆಯ ವ್ಯವಸ್ಥೆಯನ್ನು ಪರಿಶೀಲಿಸಿದರು.
ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಅರ್ಹ ಪದವೀಧರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಅಮೂಲ್ಯ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
