ನಾಲ್ಕು ದಿನಗಳ ಹಿಂದಷ್ಟೇ ತದಡಿಯಲ್ಲಿ ಮೂವರ ಸಾವು; ಇದೀಗ ಐವರು ಅಸ್ವಸ್ಥ
ಕಾರವಾರ: ಮೀನುಗಾರಿಕಾ ಬೋಟ್ಗಳಲ್ಲಿ ವಿಷಾನಿಲ ದುರಂತ ಸರಣಿ ಮುಂದುವರಿದಿದ್ದು, ನಾಲ್ಕು ದಿನಗಳ ಹಿಂದಷ್ಟೇ ಗೋಕರ್ಣ ಸಮೀಪದ ತದಡಿಯಲ್ಲಿ ಮೂವರು ಮೀನುಗಾರರನ್ನು ಬಲಿ ಪಡೆದಿದ್ದ ಘಟನೆ ಮಾಸುವ ಮುನ್ನವೇ ಮುದಗಾ ಬಂದರಿನಲ್ಲಿ ಮತ್ತಿಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರು ಅಸ್ವಸ್ಥಗೊಂಡಿದ್ದು, ಮೀನುಗಾರಿಕಾ ವಲಯದಲ್ಲಿ ಆತಂಕ ಆವರಿಸಿದೆ.
ಅಂಕೋಲಾ ತಾಲೂಕಿನ ಬೇಲೆಕೇರಿಗೆ ಸೇರಿದ ಮೂಕಾಂಬಿಕಾ ಬೋಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಒಡಿಶಾ ಮೂಲದ ಪುರಂದರ ಬಿಸರಾ (21) ಹಾಗೂ ಆಕಾಶ (24) ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ. ಬೋಟ್ನಲ್ಲಿದ್ದ ಇತರ ಐವರು ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬೋಟ್ನಲ್ಲಿ ಮೀನುಗಾರಿಕೆ ನಡೆಸಿ ‘ಚಮನ್’ ಮೀನು ಹಿಡಿದು ತರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮೀನಿನಿಂದ ಹೊರಸೂಸಿದ ವಿಷಾನಿಲವನ್ನು ಸೇವಿಸಿದ ಪರಿಣಾಮ ಕಾರ್ಮಿಕರು ಅಸ್ವಸ್ಥರಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಇತ್ತೀಚೆಗೆ ಗೋಕರ್ಣ ಸಮೀಪದ ತದಡಿ ಬಂದರಿನಲ್ಲೂ ಇದೇ ರೀತಿಯ ಘಟನೆ ಸಂಭವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ನಾಲ್ಕು ದಿನಗಳ ಅಂತರದಲ್ಲೇ ಮುದಗಾ ಬಂದರಿನಲ್ಲಿ ಮತ್ತೊಂದು ವಿಷಾನಿಲ ದುರಂತ ಸಂಭವಿಸಿರುವುದು ಮೀನುಗಾರರ ಸುರಕ್ಷತೆಯ ಬಗ್ಗೆ ಗಂಭೀರ ಆತಂಕಕ್ಕೆ ಕಾರಣವಾಗಿದೆ.
ವಾರದೊಳಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಐವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಮೀನುಗಾರಿಕಾ ಬೋಟ್ಗಳಲ್ಲಿ ಇಂತಹ ವಿಷಾನಿಲ ದುರಂತಗಳು ಮರುಕಳಿಸುತ್ತಿರುವುದರಿಂದ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
