ಬೆಲೆ ಏರಿಕೆ ವಿರುದ್ಧ ಆಕ್ರೋಶ; ಕಾಂಗ್ರೆಸ್ ಆಡಳಿತದಿಂದ ರಾಜ್ಯದ ಮಾನ ರಾಷ್ಟ್ರಮಟ್ಟದಲ್ಲಿ ಹರಾಜು: ಸಂಸದ ಕಾಗೇರಿ ಟೀಕೆ.
ಕಾರವಾರ: ಬಸ್ ಪ್ರಯಾಣ ದರ, ಹಾಲು ಹಾಗೂ ಮೊಸರಿನ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರು, ಸರ್ಕಾರಕ್ಕೆ ಭಿಕ್ಷೆ ಸಂಗ್ರಹಿಸಿ ನೀಡುವ ಮೂಲಕ ಶುಕ್ರವಾರ ಕಾರವಾರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವ ಬದಲು ಸರ್ಕಾರವೇ ಆರ್ಥಿಕ ಸಂಕಷ್ಟದಿಂದ ಹೊರಬರಲಿ ಎಂಬ ವ್ಯಂಗ್ಯದೊಂದಿಗೆ ನಡೆದ ಈ ಪ್ರತಿಭಟನೆ ಗಮನ ಸೆಳೆಯಿತು.
ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ನಗರದ ಸುಭಾಷ್ ವೃತ್ತದಲ್ಲಿ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆಯಲ್ಲಿ ಸಾಗಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಸ್ ಪ್ರಯಾಣ ದರದ ಹೆಚ್ಚಳದ ಜೊತೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಜನಸಾಮಾನ್ಯರ ಮೇಲೆ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಯ ಹೊರೆ ಹಾಕಲಾಗುತ್ತಿದೆ. ಸರ್ಕಾರಕ್ಕೆ ಆಡಳಿತ ನಡೆಸಲು ಹಣವಿಲ್ಲದಿದ್ದರೆ ಜನರಿಂದ ಭಿಕ್ಷೆ ಸಂಗ್ರಹಿಸಿ ನೀಡುತ್ತೇವೆ, ಅದರಲ್ಲಾದರೂ ಆಡಳಿತ ನಡೆಸಲಿ ಎಂಬ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಹಗರಣಗಳು ಹಾಗೂ ಆಡಳಿತಾತ್ಮಕ ವೈಫಲ್ಯಗಳ ಬಗ್ಗೆ ದೆಹಲಿಯಲ್ಲಿಯೂ ಪ್ರಶ್ನೆಗಳು ಎದುರಾಗುತ್ತಿವೆ. ದೆಹಲಿಗೆ ಹೋದಾಗ ಅಲ್ಲಿನ ಸಂಸದರು ‘ಕರ್ನಾಟಕದಲ್ಲಿ ಏನು ನಡೆಯುತ್ತಿದೆ?’ ಎಂದು ಪ್ರಶ್ನಿಸುತ್ತಾರೆ. ರಾಜ್ಯದ ಆಡಳಿತ ವ್ಯವಸ್ಥೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ವಿಷಾದನೀಯ ಎಂದು ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ, ವಾಲ್ಮೀಕಿ ನಿಗಮದ ಹಗರಣ, ಕೆಪಿಎಸ್ಸಿ ನೇಮಕಾತಿ ಅಕ್ರಮದ ಆರೋಪಗಳು ಹಾಗೂ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ಸರ್ಕಾರದ ಕಾರ್ಯವೈಖರಿಯ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕೊಲೆ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಹಾಲಿನ ಬೆಲೆ ಹೆಚ್ಚಳದೊಂದಿಗೆ ಮೊಸರು, ಬೆಣ್ಣೆ ಹಾಗೂ ತುಪ್ಪದ ದರವೂ ಏರಿಕೆಯಾಗಿದೆ. ರೈತರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಗ್ರಾಹಕರ ಮೇಲೆ ಹೊರೆ ಹಾಕುವುದು ಸರಿಯಲ್ಲ. ರೈತರಿಗೆ ನೀಡಬೇಕಾದ ಪ್ರೋತ್ಸಾಹಧನವನ್ನು ಸರ್ಕಾರ ತನ್ನ ಖಜಾನೆಯಿಂದ ಭರಿಸಬೇಕು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಾರಿಗೆ ದರ ಹೆಚ್ಚಳವೂ ಮತ್ತೊಂದು ಹೊಡೆತವಾಗಿದೆ ಎಂದು ಹೇಳಿದರು.
ಸಾರಿಗೆ ಇಲಾಖೆ ನಷ್ಟದಲ್ಲಿದೆ ಎಂಬ ಕಾರಣ ನೀಡಿ ಪ್ರಯಾಣ ದರ ಹೆಚ್ಚಿಸಲಾಗುತ್ತಿದೆ. ಆದರೆ ಸಾರಿಗೆ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಮರ್ಪಕ ಹಣ ನೀಡಲು ಹಾಗೂ ಗುತ್ತಿಗೆದಾರರ ಬಿಲ್ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ ಎಂಬ ಆರೋಪಗಳಿವೆ. ಮತ್ತೊಂದೆಡೆ ಮದ್ಯದ ಮೇಲಿನ ಆದಾಯವನ್ನೇ ಸರ್ಕಾರ ಪ್ರಮುಖವಾಗಿ ಅವಲಂಬಿಸಿದೆ ಎಂದು ಟೀಕಿಸಿದರು.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾವಿರಾರು ಕೋಟಿ ರೂ.ಗಳ ಅನುದಾನ ಮತ್ತು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಹೊಸ ಯೋಜನೆಗಳನ್ನು ಘೋಷಿಸದಂತೆ ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಸೂಚಿಸಿರುವುದಾಗಿ ಹೇಳಲಾಗುತ್ತಿದೆ. ಒಂದೆಡೆ ಹಣದ ಕೊರತೆಯ ಮಾತು, ಮತ್ತೊಂದೆಡೆ ಬೃಹತ್ ಅನುದಾನಗಳ ಘೋಷಣೆ. ಇವೆರಡರ ನಡುವಿನ ವ್ಯತ್ಯಾಸವೇ ಸರ್ಕಾರದ ಆರ್ಥಿಕ ನಿರ್ವಹಣೆಯ ಬಗ್ಗೆ ಅನುಮಾನ ಮೂಡಿಸುತ್ತಿದೆ ಎಂದು ಕಾಗೇರಿ ಅಭಿಪ್ರಾಯಪಟ್ಟರು.
ಕಾರವಾರದ ಸ್ಥಳೀಯ ಸಮಸ್ಯೆಗಳನ್ನೂ ಪ್ರಸ್ತಾಪಿಸಿದ ಅವರು, ನಗರದ ಕುಡಿಯುವ ನೀರಿನ ಸಮಸ್ಯೆ, ಪದೇಪದೇ ವಿದ್ಯುತ್ ಕಡಿತ, ಹದಗೆಟ್ಟ ರಸ್ತೆಗಳು ಹಾಗೂ ಸಾರಿಗೆ ವ್ಯವಸ್ಥೆಯಲ್ಲಿನ ತೊಂದರೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ನಡೆಯುತ್ತಿರುವ ಹಲವು ಅಭಿವೃದ್ಧಿ ಕಾಮಗಾರಿಗಳು ಹಿಂದಿನ ಅವಧಿಯಲ್ಲಿ ಮಂಜೂರಾದ ಅನುದಾನದಿಂದ ಕೈಗೊಳ್ಳಲಾಗುತ್ತಿವೆ. ಇವುಗಳನ್ನು ಈಗಿನ ಸರ್ಕಾರದ ಸಾಧನೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ನಾಗರಾಜ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
