ಕಾರವಾರ: ದಿಶಾ ಸಮಿತಿ ಸಭೆಯಲ್ಲಿ ವಂದೇ ಮಾತರಂ ಗೀತೆಯ ಗಾಯನವೇ ಬುಧವಾರ ಕೆಲಕಾಲ ಕುತೂಹಲದ ಕೇಂದ್ರವಾಯಿತು. ಎರಡು ಚರಣಗಳನ್ನು ಪ್ಲೇ ಮಾಡಿ ಗೀತೆಯನ್ನು ನಿಲ್ಲಿಸಿದಾಗ, ಉಳಿದ ಚರಣಗಳನ್ನು ತಾವೇ ಹಾಡುವ ಮೂಲಕ ಪೂರ್ಣಗೊಳಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾದರು. ಆದರೆ, ಮೂರನೇ ಚರಣದ ಸಾಲುಗಳನ್ನು ಹಾಡುವಾಗ ತಡವರಿಸಿದ ಪರಿಣಾಮ ಗಾಯನ ಅರ್ಧಕ್ಕೆ ಮೊಟಕುಗೊಂಡಿತು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಆರಂಭದಲ್ಲಿ ಈ ಪ್ರಸಂಗ ನಡೆಯಿತು. ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸದೆ ಪೂರ್ಣವಾಗಿ ಹಾಡಿಸಬೇಕು ಎಂದು ಸಂಸದ ಕಾಗೇರಿ ಒತ್ತಾಯಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರೊಂದಿಗೂ ಚರ್ಚೆ ನಡೆಸಿದರು. ಆದರೂ ಸಭೆಯಲ್ಲಿ ಎರಡು ಚರಣಗಳ ಗಾಯನ ಮಾತ್ರ ಪ್ಲೇ ಮಾಡಲಾಯಿತು.
ಗೀತೆ ಎರಡು ಚರಣಗಳ ಬಳಿಕ ನಿಂತಾಗ ಸುಮ್ಮನಿರದ ಕಾಗೇರಿ ಅವರು ಮುಂದಿನ ಚರಣವನ್ನು ತಾವೇ ಹಾಡಲು ಆರಂಭಿಸಿದರು. ದಿಶಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಉಮೇಶ್ ಭಾಗ್ವತ್, ಮುಕುಂದ್ ನಾಯ್ಕ ಹಾಗೂ ಗುರುರಾಜ್ ಶಾನಭಾಗ್ ಕೂಡ ಅವರಿಗೆ ಧ್ವನಿಗೂಡಿಸಿದರು.
ಆದರೆ, ಮೂರನೇ ಚರಣದ ಸಾಲುಗಳನ್ನು ಮುಂದುವರಿಸುವಾಗ ಸಂಸದರು ಸೇರಿದಂತೆ ಸದಸ್ಯರು ತಡವರಿಸಿದರು. ಈ ನಡುವೆ ಜಿಲ್ಲಾಧಿಕಾರಿಗಳು ಸಿಬ್ಬಂದಿಗೆ ನಾಡಗೀತೆ ಪ್ಲೇ ಮಾಡುವಂತೆ ಸೂಚಿಸಿದರು. ಇದರಿಂದ ವಂದೇ ಮಾತರಂ ಗಾಯನ ಅಲ್ಲಿಗೇ ಸ್ಥಗಿತಗೊಂಡು ನಾಡಗೀತೆ ಮೊಳಗಿತು.
ಪೂರ್ಣ ವಂದೇ ಮಾತರಂ ಗಾಯನಕ್ಕೆ ಸಂಸದರು ಆಸಕ್ತಿ ತೋರಿದರೂ, ಮೂರನೇ ಚರಣದ ವೇಳೆ ಉಂಟಾದ ತಡವರಿಕೆ ಹಾಗೂ ಬಳಿಕ ನಾಡಗೀತೆ ಮೊಳಗಿದ ಪ್ರಸಂಗ ಸಭೆಯಲ್ಲಿದ್ದವರ ಗಮನ ಸೆಳೆಯಿತು.
