ಸಿದ್ದಾಪುರ: ಪಾನ್ ಶಾಪ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಅಂಗಡಿಯ ಕೆಲಸಗಾರನ ವಿರುದ್ಧ ಸಿದ್ದಾಪುರ ಪೊಲೀಸರು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಕವಂಚೂರು ಗ್ರಾಮದ ಪಾನ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಗಣಪತಿ ಪಕೀರ ಭೋವಿ (49) ಎಂಬಾತ ಸಾರ್ವಜನಿಕರಿಗೆ ಅಂಗಡಿಯ ಎದುರಿನ ಸ್ಥಳದಲ್ಲಿ ಮದ್ಯ ಸೇವಿಸಲು ಅವಕಾಶ ಕಲ್ಪಿಸಿದ್ದಾನೆ ಎನ್ನಲಾಗಿದೆ. ನವೆಂಬರ್ 23ರಂದು ಸಂಜೆ ಸುಮಾರು 6 ಗಂಟೆಗೆ ಈ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಸಿದ್ದಾಪುರ ಠಾಣೆಯ ಪಿಎಸ್ಐ ಶಾಂತಿನಾಥ ಕೆ. ಪಾಸಾನೆ ಅವರು ಪೊಲೀಸ್ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು. ಈ ವೇಳೆ ಸ್ಥಳದಲ್ಲಿ 90 ಮಿ.ಲೀ. ಅಳತೆಯ ಹೇವರ್ಡ್ಸ್ ಚಿಯರ್ಸ್ ವಿಸ್ಕಿಯ ಮೂರು ಖಾಲಿ ಟೆಟ್ರಾ ಪ್ಯಾಕೆಟ್ಗಳು ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸ್ಗಳು ಪತ್ತೆಯಾಗಿವೆ.
ಈ ಸಂಬಂಧ ಗಣಪತಿ ಭೋವಿ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 15(ಎ) ಮತ್ತು 32(3)ರ ಅಡಿಯಲ್ಲಿ ಗುನ್ನೆ ನಂ. 239/2026 ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
