ಜೋಯಿಡಾ,:
ಸಂಪೂರ್ಣ ಹದಗೆಟ್ಟು ಹೊಂಡಮಯವಾಗಿರುವ ದಾಂಡೇಲಿ – ಬರ್ಚಿ – ಗಣೇಶಗುಡಿ ರಸ್ತೆಯನ್ನು ತಕ್ಷಣವೇ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ, ದಾಂಡೇಲಿ ಪ್ರವಾಸೋದ್ಯಮಿಗಳ ಸಂಘದ ವತಿಯಿಂದ ಅಧ್ಯಕ್ಷ ಉಸ್ಮಾನ್ ವಹಾಬ್ ಅವರ ನೇತೃತ್ವದಲ್ಲಿ ಜೋಯಿಡಾ ತಹಶೀಲ್ದಾರ್ ಪ್ರಕಾಶ ಕಲ್ಲೋಳಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು:
ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಉಸ್ಮಾನ್ ವಹಾಬ್, “ದಾಂಡೇಲಿ ಮತ್ತು ಜೋಯಿಡಾ ಭಾಗದ ಜನರು ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಇಲ್ಲಿನ ರಿವರ್ ರಾಫ್ಟಿಂಗ್, ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಭೇಟಿ ನೀಡುತ್ತಾರೆ. ಆದರೆ, ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿರುವುದರಿಂದ ಪ್ರವಾಸಿಗರು ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಸಕರಾದ ಆರ್.ವಿ. ದೇಶಪಾಂಡೆ ಅವರು ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದರೂ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಮತ್ತು ಶಾಸಕರ ಹೆಸರಿಗೆ ಧಕ್ಕೆಯಾಗುತ್ತಿದೆ. ಮುಂದಿನ ಎರಡು ದಿನಗಳ ಒಳಗಾಗಿ ರಸ್ತೆಯ ಹೊಂಡಗಳನ್ನು ಮುಚ್ಚದಿದ್ದರೆ ರಸ್ತೆಯ ಮೇಲೆಯೇ ಕುಳಿತು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ,” ಎಂದು ಎಚ್ಚರಿಸಿದರು.
15 ನಿಮಿಷದ ಪ್ರಯಾಣಕ್ಕೆ 1 ಗಂಟೆ ಬೇಕಾಗಿದೆ:
ಪ್ರವಾಸೋದ್ಯಮಿ ಅನಿಲ ಪಾಟ್ನೇಕರ್ ಮಾತನಾಡಿ, “ದಾಂಡೇಲಿಯಿಂದ ಗಣೇಶಗುಡಿಗೆ ತಲುಪಲು ಈ ಹಿಂದೆ ಕೇವಲ 15 ನಿಮಿಷ ಬೇಕಾಗಿತ್ತು. ಆದರೆ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ಈಗ ಒಂದು ಗಂಟೆ ಸಮಯ ಹಿಡಿಯುತ್ತಿದೆ. ಶಾಸಕ ಆರ್.ವಿ. ದೇಶಪಾಂಡೆ ಅವರು ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಧಿಕಾರಿಗಳು ಇದನ್ನು ಗಮನಿಸಿ, ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚಬೇಕು ಹಾಗೂ ಹೊಸ ರಸ್ತೆ ನಿರ್ಮಿಸುವಾಗ ಕಳಪೆ ಕಾಮಗಾರಿ ಮಾಡದೆ ಗುಣಮಟ್ಟದ ರಸ್ತೆ ನಿರ್ಮಿಸಬೇಕು,” ಎಂದು ಒತ್ತಾಯಿಸಿದರು.
ಅಧಿಕಾರಿಗಳ ಭರವಸೆ:
ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ (PWD) ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಬಸವರಾಜ್ ಪ್ರತಿಕ್ರಿಯಿಸಿ, “ಈ ರಸ್ತೆಯು ಹಳಿಯಾಳ ಮತ್ತು ಜೋಯಿಡಾ ತಾಲೂಕುಗಳ ವ್ಯಾಪ್ತಿಗೆ ಬರುತ್ತದೆ. ರಸ್ತೆ ಡಾಂಬರೀಕರಣಕ್ಕೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಬಾಕಿ ಇದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಸಂಜೀವ ಭಜಂತ್ರಿ, ದಾಂಡೇಲಿ ಪ್ರವಾಸೋದ್ಯಮ ಸಂಘದ ಉಪಾಧ್ಯಕ್ಷ ಇಮಾಮ್ ಸರವಾರ್, ಕಾರ್ಯದರ್ಶಿ ಸುನೀಲ್ ಪಡವಲಕರ, ಖಜಾಂಚಿ ಸುರೇಶ ನುಲವಿ, ಯುವ ಪ್ರವಾಸೋದ್ಯಮಿ ಶಮಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
