ಕಾರವಾರ: ಆಹಾರ ಅರಸಿ ಬಂದಿದ್ದ ಎರಡು ಗಂಡು ಕಡವೆಗಳು ತೆರೆದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಗರದ ಬೈತ್ಖೋಲ್ ವ್ಯಾಪ್ತಿಯ ಅಲಿಗದ್ದಾದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಒಂದೇ ಬಾವಿಯಲ್ಲಿ ಪದೇಪದೆ ಇಂತಹ ದುರಂತಗಳು ಸಂಭವಿಸುತ್ತಿದ್ದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಆಹಾರ ಅರಸಿಕೊಂಡು ಬಂದ ಕಡವೆಗಳು ಬಾವಿಯ ಸುತ್ತಲಿನ ಕೆಸರು ಪ್ರದೇಶದಲ್ಲಿ ಕಾಲು ಜಾರಿ ಒಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬಾವಿಯಿಂದ ಹೊರಬರಲಾಗದೆ ಎರಡು ಪ್ರಾಣಿಗಳು ಮೃತಪಟ್ಟಿವೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲಿಗದ್ದಾದ ಈ ತೆರೆದ ಬಾವಿ ಹಲವು ವರ್ಷಗಳಿಂದ ಅಪಾಯದ ತಾಣವಾಗಿ ಪರಿಣಮಿಸಿದೆ. ಈ ಹಿಂದೆಯೂ ಬಾವಿಗೆ ಬಿದ್ದ ಜಾನುವಾರುಗಳು ಹಾಗೂ ಕಾಡುಪ್ರಾಣಿಗಳು ಮೃತಪಟ್ಟಿದ್ದವು. ಅಷ್ಟೇ ಅಲ್ಲದೆ, ಮಹಿಳೆಯೊಬ್ಬರೂ ಇದೇ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು ಎನ್ನಲಾಗಿದೆ. ಹೀಗಿದ್ದರೂ ಬಾವಿಗೆ ತಡೆಗೋಡೆ ನಿರ್ಮಿಸುವುದಾಗಲಿ, ಸುತ್ತಲೂ ಸುರಕ್ಷತಾ ಬೇಲಿ ಅಳವಡಿಸುವುದಾಗಲಿ ಸಂಬಂಧಪಟ್ಟ ಇಲಾಖೆಯಿಂದ ಆಗಿಲ್ಲ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ನಿರಂತರವಾಗಿ ಪ್ರಾಣಹಾನಿ ಸಂಭವಿಸುತ್ತಿರುವ ಈ ಬಾವಿಯ ನೀರು ಕೂಡ ಕಲುಷಿತಗೊಂಡಿದ್ದು, ಬಳಕೆಗೆ ಯೋಗ್ಯವಿಲ್ಲದ ಸ್ಥಿತಿಯಲ್ಲಿದೆ. ಮಾನವ ಜೀವಕ್ಕೂ, ಪ್ರಾಣಿ-ಪಕ್ಷಿಗಳಿಗೂ ಅಪಾಯಕಾರಿಯಾಗಿರುವ ಈ ಬಾವಿಯ ಸುತ್ತ ಕನಿಷ್ಠ ತಂತಿ ಬೇಲಿಯನ್ನಾದರೂ ಅಳವಡಿಸಬೇಕಿತ್ತು. ಈ ಹಿಂದಿನ ಘಟನೆಗಳ ಬಳಿಕವಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದರೆ ಇಂದಿನ ದುರಂತವನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಬಾವಿಗೆ ತಡೆಗೋಡೆ ನಿರ್ಮಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
