20 ಅಡಿ ಆಳದ ನೀರಿನ ಗುಂಡಿಗೆ ಜಾರಿದ ಪ್ರವಾಸಿಗ – ರೆಸ್ಕ್ಯೂ ಟ್ಯೂಬ್ ಮೂಲಕ ವಿಜಯ ನಾಯಕ್ ಅವರಿಂದ ತಕ್ಷಣ ರಕ್ಷಣೆ
ಅಂಕೋಲಾ: ವಿಭೂತಿ ಜಲಪಾತ ವೀಕ್ಷಣೆಗೆಂದು ಚೆನ್ನೈನಿಂದ ಆಗಮಿಸಿದ್ದ ಪ್ರವಾಸಿಗನೊಬ್ಬ ಆಕಸ್ಮಿಕವಾಗಿ ಸುಮಾರು 20 ಅಡಿ ಆಳದ ನೀರಿನ ಗುಂಡಿಗೆ ಜಾರಿಬಿದ್ದ ಘಟನೆ ಶುಕ್ರವಾರ ನಡೆದಿದೆ. ಈ ವೇಳೆ ಜಲಪಾತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜೀವ ರಕ್ಷಕ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರವಾಸಿಗನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೆನ್ನೈನಿಂದ ಒಟ್ಟು ಒಂಬತ್ತು ಮಂದಿ ಪ್ರವಾಸಕ್ಕೆ ಆಗಮಿಸಿದ್ದರು. ದಾಂಡೇಲಿ ಪ್ರವಾಸ ಮುಗಿಸಿ ನ.20ರಂದು ಬೆಳಿಗ್ಗೆ ಸುಮಾರು 11.50ರ ವೇಳೆಗೆ ವಿಭೂತಿ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಗಜಪತಿ (25) ಎಂಬಾತ ನೀರಿಗೆ ಇಳಿದು, ಜಲಪಾತದ ಧುಮ್ಮಿಕ್ಕುವ ನೀರಿನ ಸಮೀಪವಿದ್ದ ಬಂಡೆಯ ಮೇಲೆ ಕುಳಿತು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಆಳವಾದ ನೀರಿನ ಗುಂಡಿಗೆ ಬಿದ್ದಿದ್ದಾನೆ.
ಗಜಪತಿಗೆ ಈಜಲು ಬಾರದಿರುವುದನ್ನು ಗಮನಿಸಿದ ಆತನ ಸ್ನೇಹಿತ ಅಶ್ವತ್ ತಕ್ಷಣ ನೆರವಿಗೆ ಧಾವಿಸಿದ್ದಾನೆ. ಆದರೆ ನೀರಿನ ಆಳ ಮತ್ತು ಪರಿಸ್ಥಿತಿಯ ತೀವ್ರತೆಯಿಂದಾಗಿ ಆತನಿಂದ ಸ್ನೇಹಿತನನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ.
ಇದೇ ಸಂದರ್ಭದಲ್ಲಿ ಅಲ್ಲಿಯೇ ಜೀವ ರಕ್ಷಕ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ ನಾಯಕ್ ಅವರು ಘಟನೆ ಗಮನಿಸಿ ಕ್ಷಣವೂ ತಡಮಾಡದೆ ರಕ್ಷಣೆಗೆ ಧಾವಿಸಿದ್ದಾರೆ. ರೆಸ್ಕ್ಯೂ ಟ್ಯೂಬ್ ಬಳಸಿ ಮುಳುಗುತ್ತಿದ್ದ ಗಜಪತಿಯನ್ನು ಸುರಕ್ಷಿತವಾಗಿ ನೀರಿನಿಂದ ಮೇಲಕ್ಕೆ ಕರೆತಂದು ಜೀವ ಉಳಿಸಿದ್ದಾರೆ.
ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಪ್ರವಾಸಿಗನ ಜೀವ ಉಳಿಸಿದ ವಿಜಯ ನಾಯಕ್ ಅವರ ಕಾರ್ಯಕ್ಕೆ ಸ್ಥಳದಲ್ಲಿದ್ದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಜಲಪಾತದಂತಹ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಎಷ್ಟು ಅಗತ್ಯ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.
