ದಾಂಡೇಲಿ: ಸಾಹಿತ್ಯ ಎಂದರೆ ಅದು ಪ್ರೀತಿ, ಪ್ರೇಮಗಳ ಭಾವನೆ ಅಥವಾ ಇನ್ಯಾವುದೋ ಸಂಗತಿಗಳ ಅಕ್ಷರ ಜೋಡಣೆಯಷ್ಟೇ ಅಲ್ಲ. ಅದು ಸಾಮಾಜಿಕ ಜವಾಬ್ದಾರಿಯ ಬದುಕು ಕೂಡ ಎಂದು ಹಿರಿಯ ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಡಾ. ಆರ್. ಜಿ. ಹೆಗಡೆ ನುಡಿದರು.
ಅವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿ ತಾಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಾರ್ತಿಕ: ಅನುದಿನ-ಅನುಸ್ಪಂದನ ಸರಣಿ ಕಾರ್ಯಕ್ರಮಗಳ ಸಮಾರೋಪ ಹಾಗೂ ದಾಂಡೇಲಿ ತಾಲೂಕು ಸಾಹಿತ್ಯಾವಲೋಕನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೆಲವರಿಗೆ ಒಳ್ಳೆಯತನ ಕಂಡರೂ ಆಗದು. ಶುಭ್ರವಾದ ಗೋಡೆಯ ಅಂದಗೆಡಿಸುವ ಮನಸ್ಥಿತಿಯವರೂ ಇರುತ್ತಾರೆ. ಅವರಿಗೆ ಅದರಲ್ಲಿಯೇ ತೃಪ್ತಿ. ಅನೇಕ ಸಾಹಿತ್ಯ ಕೃತಿಗಳಲ್ಲಿಯೂ ಇಂತಹ ಪಾತ್ರಗಳನ್ನ ಕಾಣಬಹುದು. ಸಾಹಿತ್ಯ ಇಂಥಹ ಮನಸ್ಸುಗಳನ್ನು ದೂರ ಮಾಡುವ, ಳ್ಳೆಯತನಗಳನ್ನು ಒಟ್ಟುಗೂಡಿಸುವ ಹಾಗೂ ಎಲ್ಲರನ್ನ ಒಳಗೊಳ್ಳುವ ಕೆಲಸ ಮಾಡಬೇಕು ಎಂದರು.
ಚಾಲನೆ ನೀಡುವುದು ಎಂದರೆ ಒಮ್ಮೊಮ್ಮೆ ವಾಹನವನ್ನ ತಳ್ಳಿ ಡಕಲ್ ಸ್ಟಾರ್ಟ್ ಮಾಡಿದ ಹಾಗೆ ಇತುತ್ತದೆ. ಆದರೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಸ್ಥಿತಿಯಿಲ್ಲ. ಅದು ಸದಾ ಚಲನೆಯಲ್ಲಿಯೇ ಇದೆ. ನಿಜಕ್ಕೂ ಜಿಲ್ಲೆಯ ಸಾಹಿತ್ಯ ಪರಿಷತ್ತು ದಾಖಲೆಯ ಕಾರ್ಯಕ್ರಮಗಳನ್ನ ಸಂಘಟಿಸಿದ್ದು, ರಾಜ್ಯಕ್ಕೆ ಮಾದರಿಯಾಗಿದೆ. ಈ ಕ್ರೀಯಾಶೀಲ ಸಂಘಟನೆಯ ನಾಯಕತ್ವ ಮುಂದುವರೆಯುವಂತಾಗಬೇಕು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾಂಸ ಕೆ.ಎಲ್. ಜಮಾದಾರ್ ಅವರು ನಮ್ಮಂತಹ ತೆರೆಯ ಮರೆಯ ಒಬ್ಬ ಕಲಾವಿದನನ್ನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಮಾಡಿರುವ ವಾಸರೆಯವರಿಗೆ ಹಾಗೂ ಅವರ ತಂಡಕ್ಕೆ ಚಿರಋಣಿಯಾಗಿದ್ದೇನೆ. ಇವರ ನೇತೃತ್ವದ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತತ ಎಲ್ಲರನ್ನು ಒಳಗೊಳ್ಳುವ ಕೆಲಸ ಮಾಡಿದೆ. ಅದು ಮುಂದುವರೆಯಬೇಕು ಎಂದರು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ್ ಅವರು ಐದು ವರ್ಷಗಳ ಕಾಲ ತಾವು ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಹಾಗೂ ಅದಕ್ಕೆ ಅವಕಾಶ ನೀಡಿದ ಸಂದರ್ಭವನ್ನು ಸ್ಮರಿಸಿ, ತಮ್ಮಂತಹ ಅನೇಕರಿಂದ ರಂಗಭೂಮಿ ಕಲಾವಿದರನ್ನು, ಬರಹಗಾರರನ್ನ ಬೆಳೆಸಿದ ಬಿ.ಎನ್. ವಾಸರೆಯವರ ಸಂಘಟನಾ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅತಿಥಿಗಳಾಗಿದ್ದ ಸಾಹಿತ್ಯಾರಾಧಕರಾದ ರೇಷ್ಮಾ ಶೆಟ್ಟಿ ಪ್ರತಿಯೊಬ್ಬರಲ್ಲಿಯೂ ಕನ್ನಡದ ಪ್ರೀತಿ ಇರಬೇಕು ಎಂದರು.
ಸಮರೋಪ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರು 5
ಐದು ವರ್ಷದ ಸಂಘಟನೆ ಹಲವಾರು ರೀತಿಯ ಅನುಭವಗಳನ್ನು ನೀಡಿದೆ. ಖುಶಿಯ ಜೊತೆಗೆ ಕಷ್ಟಗಳನ್ನ ಎದುರಿಸಿದ್ದೇವೆ. ಸಂಘಟನೆ ಹೊಸ ಆಲೋಚನೆಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿ ಹಲವಾರು ವೈಶಿಷ್ಟ ಪೂರ್ಣ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಪರಿಷತ್ತಿನ ಮುನ್ನಡೆಸಿದ್ದೇವೆ ಎಂಬ ಆತ್ಮತೃಪ್ತಿಯಂತೂ ಇದ್ದೇ ಇದೆ ಎಂದರು. ಸಂಘಟನೆದಕ್ಕೂ ಇಡೀ ಜಿಲ್ಲೆಯ ಜನ ತೋರಿಸಿದ ಪ್ರೀತಿಯನ್ನು ಸ್ಮರಿಸಿ, ಅಸೂಯೆ ತುಂಬಿದ ಕೆಲವರ ಕಾಲೆಳೆಯುವ ಪ್ರಯತ್ನವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿ, ಎಲ್ಲವುಗಳ ನಡುವೆ ಇಡೀ ಜಿಲ್ಲೆಯಾದ್ಯಂತ ಸಾವಿರಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ತೃಪ್ತಿ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಪರಿಷತ್ತಿನ ಅಧ್ಯಕ್ಷನಾಗಿ ಮಾಡಿದ ಕಾರ್ಯ ಹಾಗೂ ಕಾರ್ಯಕಾರಿ ಸಮಿತಿ ಮತ್ತು ದಾಂಡೇಲಿಯ ಜನರ ಸಹಕಾರವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ದಾಂಡೇಲಿ ತಾಲೂಕು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಹಾಗೂ ಕಲಾವಿದರನ್ನ, ಗಾಯಕರನ್ನು, ಪತ್ರಕರ್ತರನ್ನು, ಸಾಹಿತಿಗಳನ್ನ ಹಾಗೂ ಕಾರ್ಯಕ್ರಮಗಳಿಗೆ ದಾಸೋಹ ನೀಡಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಿದರು. ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ್ ನಾಯಕ್ ಐದು ವರ್ಷಗಳಲ್ಲಿ 80 ಕ್ಕೂ ಹೆಚ್ಚು ಕಾರ್ಯಕ್ರಮ ಸಂಘಟಿಸಿದ ವರದಿ ವಾಚಿಸಿದರು.
ಶಿಕ್ಷಕಿ ನಂದಿನಿ ನಾಯ್ಕ ಪ್ರಾರ್ಥಿಸಿದರು. ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಕನ್ನಡದ ನೃತ್ಯ ಮಾಡಿದರು. ಎಂ.ಆರ್. ನಾಯಕ, ಹನುಮಂತ ಕಾರ್ಗಿ, ಪ್ರವೀಣ್ ನಾಯಕ, ಬಸವರಾಜ್ ನರಸಪ್ಪನವರ್, ಕಲ್ಪನಾ ಪಾಟೀಲ್, ರಘುವೀರ ಗೌಡಾ, ಅಕ್ಷಯ ಗೋಸಾವಿ ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ ಸ್ವಾಗತಿಸಿದರು. ವೆಂಕಮ್ಮ ಗಾಂವಕರ ಪ್ರಾಸ್ತಾವಿಕ ಮಾತನಾಡಿದರು ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವಂದಿಸಿದರು. ಆಶಾ ದೇಶಭಂಡಾರಿ ನಿರೂಪಿಸಿದರು. ನರೇಶ್ ನಾಯ್ಕ, ಸುರೇಶ್ ಪಾಲನಕರ, ಸುರೇಶ್ ಕಾಮತ, ಜಲಜಾ ವಾಸರೆ ಮುಂತಾದವರು ಸಹಕರಿಸಿದರು.
