ಸಾಕಷ್ಟು ಹೋರಾಟದ ನಂತರ ಕುಮಟಾಗೆ ಖಾಯಂ ತಹಶೀಲ್ದಾರ್ ನೇಮಕ ನಡೆದಿದೆ. ಆದರೆ, `ತಹಶೀಲ್ದಾರ್ ಸಾರ್ವಜನಿಕ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದಾರೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆರೋಪಿಸಿದ್ದಾರೆ. `ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಕಂದಾಯ ಸಚಿವರಿಗೂ ಈ ಕೇಂದ್ರದವರು ಪತ್ರ ಬರೆದಿದ್ದಾರೆ.
`60ವರ್ಷದ ವಿಮಲಾ ಶಿರಾಲಿ ಅವರು ಇಂದಿರಾಗಾoಧಿ ವೃದ್ಧಾಪ್ಯ ವೇತನಕ್ಕೆ ಅರ್ಜಿ ನೀಡಿದ್ದು, ತಮ್ಮ ಮಕ್ಕಳು ನೋಡಿಕೊಳ್ಳುತ್ತಿಲ್ಲ ಎಂದು ಬಾಂಡ್ ಪೆಪರ್ ಮೇಲೆ ಅಪಢಾವಿಟ್ ಮಾಡಿ ಕೊಟ್ಟಿದ್ದಾರೆ. ಅದಾಗಿಯೂ ತಹಶೀಲ್ದಾರು ಅವರ ಪಿಂಚಣಿ ರದ್ಧು ಮಾಡಿದ್ದಾರೆ. ಮರ್ಶ್ಲ ಲೀನ ಎಂಬಾತರು ಇಂದಿರಾಗಾoಧಿ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಗಂಡು ಮಕ್ಕಳಿದ್ದಾರೆ ಎಂಬ ಕಾರಣ ನೀಡಿ ಪಿಂಚಣಿ ತಡೆಯಲಾಗಿದೆ. ಆದರೆ, ಮರ್ಶ್ಲ ಲೀನ ಅವರಿಗೆ ಮಕ್ಕಳೇ ಇಲ್ಲ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೆಲ್ ರೋಡಿಗ್ರಸ್ ವಿವರಿಸಿದ್ದಾರೆ.
`ಆಸಿಯಾಬಿ ಹುಸೇನ್ ಶೇಕ್ ಅವರು ಆದಾಯ ಪ್ರಮಾಣ ಪತ್ರ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದು, ಅವರ ಪತಿ ಆಸ್ಪತ್ರೆಯಲ್ಲಿದ್ದರೂ ಅವರನ್ನು ಅಧಿಕಾರಿಗಳು ಕಚೇರಿಗೆ ಬರುವಂತೆ ಕರೆದಿದ್ದಾರೆ. ಅನಾರೋಗ್ಯದ ಕಾರಣ ಕಚೇರಿಗೆ ಬಾರದ ಕಾರಣ ಆದಾಯ ಪ್ರಮಾಣ ಪತ್ರ ರದ್ದು ಮಾಡಲಾಗಿದೆ. ಕೌ ಸರ್ ಜಲೀಲ್ ಶೇಕ್ ಅವರು ವಂಶಾವಳಿ ದಾಖಲೆಗೆ ಅರ್ಜಿ ಸಲ್ಲಿಸಿದ್ದು, ಗುರುತಿನ ಚೀಟಿ ಇಲ್ಲ ಎಂಬ ಕಾರಣ ನೀಡಿ ಆ ಅರ್ಜಿ ವಿಲೆಗೆ ತರಲಾಗಿದೆ. ಹೀಗೆ ಅನಗತ್ಯ ಸುಳ್ಳು ಹಿಂಬರಹ ನೀಡಿ ಜನರನ್ನು ಅಲೆದಾಡಿಸಲಾಗುತ್ತಿದೆ’ ಎಂದು ಅವರು ದೂರಿದ್ದಾರೆ.
`ಮುಸ್ಲಿಂ ರುದ್ರ ಭೂಮಿಗೆ ಜಾಗ ಮಂಜೂರಿ ಮಾಡುವಂತೆ ವಕ್ಪ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವರಿಗೆ ಸಲ್ಲಿಕೆಯಾದ ಮನವಿ ತಹಶೀಲ್ದಾರ್ ಕಚೇರಿಗೆ ಬಂದಿದೆ. ಆದರೆ, 5 ತಿಂಗಳು ಕಳೆದರೂ ಸಚಿವರ ಪತ್ರಕ್ಕೆ ತಹಶೀಲ್ದಾರ್ ಉತ್ತರ ನೀಡಿಲ್ಲ. ನೂರಾನಿ ಮುಸ್ಲಿಂ ಕಮಿಟಿ ಈ ಬಗ್ಗೆ ಅರ್ಜಿ ಸಲ್ಲಿಸಿದರೂ ಅವರಿಗೂ ತಹಶೀಲ್ದಾರ್ ಹಿಂಬರಹ ನೀಡಿಲ್ಲ’ ಎಂದವರು ವಿವರಿಸಿದ್ದಾರೆ. `ವೃದ್ದಾಪ್ಯ ವೇತನಕ್ಕಾಗಿ ವಯಸ್ಸಾದವರು ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದು, ಈ ಬಗ್ಗೆ ಸ್ವತಃ ತಹಶೀಲ್ದಾರರನ್ನು ಭೇಟಿ ಮಾಡಿ ಚರ್ಚಿಸಿದಾಗಲೂ ಹಾರಿಕೆ ಉತ್ತರ ನೀಡಿದ್ದಾರೆ. ಈ ಎಲ್ಲಾ ಹಿನ್ನಲೆ ಅವರ ವಿರುದ್ಧ ಕ್ರಮ ಜರುಗಿಸಿ, ಕುಮಟಾದಿಂದ ವರ್ಗಾಯಿಸಬೇಕು’ ಎಂದು ಜನಸಾಮಾನ್ಯ ಸಮಾಜ ಕಲ್ಯಾಣ ಕೇಂದ್ರದವರು ಆಗ್ರಹಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಪ್ರಮುಖರಾದ ಇಮಾಮ್ ಸಾಬ್, ಸಂಜಯ್ ಹೊಲೆಯರ್, ಪುರ್ಸೊ ಹರಿಕಾಂತ್, ಲಕ್ಷಿ ನಾಯ್ಕ, ಸಿಂಪರಿಯನ್ ರೋಡ್ರಿಗಸ್, ಗಣಪು ಮುಕ್ರಿ ಮೊದಲಾದವರು ತಮಗಾದ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ನೂರಾನಿ ಕಮಿಟಿಯ ಅಧ್ಯಕ್ಷ ಮೂಜಿಬ್ ಷರೀಫ್ ಸದಸ್ಯರಾದ ಫಾವಾಜಿಯ್ ಬಾನು ತಸ್ಲೀಮ್, ಯಾಸ್ಮಿನ್ ಬಾನು ಹಾಗೂ ಹೊಲನಗದ್ದೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಕೀಲಾ ಬಾನು ಸಹ ಆಕ್ರೋಶವ್ಯಕ್ತಪಡಿಸಿದ್ದಾರೆ.
