ಶಿರಸಿ:
‘ಪಾಪ ಆ ವಿದ್ಯಾರ್ಥಿನಿ ಹುಟ್ಟು ಅಂಧೆ, ಆದರೆ ಆಕೆಯ ಫಲಿತಾಂಶ ಪ್ರಕಟಿಸಿದ ಶಿಕ್ಷಣ ಮಂಡಳಿಯವರಿಗೂ ಕಣ್ಣು ಕಾಣುವುದಿಲ್ಲವೇ?’ – ಶಿರಸಿಯ ಜನತೆ ಹಾಗೂ ಪಾಲಕರು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶದಿಂದ ಕೇಳುತ್ತಿರುವ ಪ್ರಶ್ನೆಯಿದು. ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಕರಾಳ ಎಡವಟ್ಟೊಂದು ಶಿರಸಿಯಲ್ಲಿ ಬೆಳಕಿಗೆ ಬಂದಿದ್ದು, ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯೊಬ್ಬಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಂತಾಗಿದೆ.
ಶಿರಸಿಯ ಯೂನಿಯನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಮೈಲ್ ಖಾನ್ ಈ ಅನ್ಯಾಯಕ್ಕೊಳಗಾದ ನತದೃಷ್ಟೆ. ಹುಟ್ಟು ಅಂಧಳಾಗಿರುವ ಈಕೆ, ಕಣ್ಣು ಕಾಣಿಸದಿದ್ದರೂ ಎದೆಗುಂದದೆ, ಭವಿಷ್ಯದ ಮಹತ್ವದ ಘಟ್ಟವಾದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿದ್ದಳು. ಒಟ್ಟು ಆರು ವಿಷಯಗಳ ಪರೀಕ್ಷೆಯನ್ನು ಈಕೆ ಬರೆದಿದ್ದಳು. ಆದರೆ, ಫಲಿತಾಂಶ ಪ್ರಕಟವಾದಾಗ ಆಕೆಯ ಸಮಾಜ ವಿಜ್ಞಾನ ವಿಷಯದ ಮುಂದೆ ‘ಗೈರು’ (Absent) ಎಂದು ನಮೂದಿಸಲಾಗಿದೆ. ಮಂಡಳಿಯ ಈ ಘೋರ ದೋಷ ಕಂಡು ವಿದ್ಯಾರ್ಥಿನಿ ಹಾಗೂ ಪೋಷಕರಿಗೆ ಅಕ್ಷರಶಃ ಸಿಡಿಲು ಬಡಿದಂತಾಗಿದೆ.
ಶ್ರೀಮೈಲ್ ಖಾನ್ ಓದಿನಲ್ಲಿ ಅತ್ಯಂತ ಚಾಣಾಕ್ಷಳಾಗಿದ್ದು, ಪ್ರಕಟವಾಗಿರುವ ಐದು ವಿಷಯಗಳ ಫಲಿತಾಂಶವೇ ಆಕೆಯ ಪ್ರತಿಭೆಗೆ ಕನ್ನಡಿ ಹಿಡಿದಿದೆ. ಈ ವಿದ್ಯಾರ್ಥಿನಿ ಪ್ರಥಮ ಭಾಷೆ ಉರ್ದುವಿನಲ್ಲಿ 124 ಅಂಕಗಳನ್ನು ಪಡೆದಿದ್ದರೆ, ಕನ್ನಡದಲ್ಲಿ 100 ಅಂಕಗಳನ್ನು ಗಳಿಸಿದ್ದಾಳೆ. ಉಳಿದ ವಿಷಯಗಳಲ್ಲಿಯೂ ನೂರರ ಸಮೀಪಕ್ಕೆ ಅತ್ಯುತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ. ಹೀಗಿರುವಾಗ, ಕೇವಲ ಸಮಾಜ ವಿಜ್ಞಾನ ಪರೀಕ್ಷೆಗೆ ಗೈರಾಗಿದ್ದಾಳೆ ಎಂದು ಅಂಕಪಟ್ಟಿಯಲ್ಲಿ ತೋರಿಸಿರುವುದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ ಹಾಗೂ ತಾಂತ್ರಿಕ ಲೋಪವನ್ನು ಎತ್ತಿ ತೋರಿಸುತ್ತಿದೆ.
ಬೆಳಕು ಕಾಣದ ಆಕೆಯ ಬದುಕಿನಲ್ಲಿ ಶಿಕ್ಷಣವೇ ಆಶಾಕಿರಣವಾಗಿತ್ತು. ಆದರೆ, ಇಲಾಖೆಯ ಈ ಎಡವಟ್ಟಿನಿಂದ ವಿದ್ಯಾರ್ಥಿನಿಯ ಭವಿಷ್ಯಕ್ಕೆ ತೀವ್ರ ಅನ್ಯಾಯವಾಗಿದೆ. ಮಂಡಳಿಯ ತಪ್ಪು ನಿರ್ಧಾರದಿಂದಾಗಿ ಆಕೆ ಅನುಭವಿಸುತ್ತಿರುವ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಕೂಡಲೇ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪರೀಕ್ಷಾ ಕೇಂದ್ರದ ಹಾಜರಾತಿ ವರದಿಯನ್ನು ಪರಿಶೀಲಿಸಬೇಕು. ತಕ್ಷಣವೇ ಈ ಅಚಾತುರ್ಯವನ್ನು ಸರಿಪಡಿಸಿ, ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಆಕೆಯ ಮುಂದಿನ ವ್ಯಾಸಂಗಕ್ಕೆ ದಾರಿಮಾಡಿಕೊಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯ ಪಾಲಕರು ಹಾಗೂ ಸ್ಥಳೀಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಿದ್ದಾರೆ.
