ಕಾರವಾರ:
ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳ ವ್ಯಾಪ್ತಿಗೆ ಬರುವ 228 ಗ್ರಾಮ ಪಂಚಾಯಿತಿಗಳ ಒಟ್ಟು 2,642 ಚುನಾಯಿತ ಸದಸ್ಯರ ಸ್ಥಾನಗಳನ್ನು ನಿಗದಿಪಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಈ ಸದಸ್ಯರ ಸಂಖ್ಯೆ ನಿಗದಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಥವಾ ಸಂಬಂಧಪಟ್ಟವರು ಯಾವುದೇ ಆಕ್ಷೇಪಣೆ ಹಾಗೂ ಅಹವಾಲುಗಳನ್ನು ಸಲ್ಲಿಸಲು ಏಪ್ರಿಲ್ 24, 2026 ರ ಸಂಜೆ 5:00 ಗಂಟೆಯ ಒಳಗಾಗಿ ಕಾಲಾವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆಗಳನ್ನು ಆನ್ಲೈನ್ ವೆಬ್ಸೈಟ್ (https://rdpr.karnataka.gov.in/rdc/public/) ಮೂಲಕ ‘ಸಾರ್ವಜನಿಕ ಸಲಹೆಗಳು’ ವಿಭಾಗದಲ್ಲಿ ಸಲ್ಲಿಸಬಹುದು. ಅಲ್ಲದೆ, ಖುದ್ದಾಗಿ ಅಥವಾ ಅಂಚೆ ಮೂಲಕ ಆಯೋಗದ ಕಚೇರಿಗೆ (ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001) ತಲುಪಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಮತ್ತು ಅಂಚೆ ವಿಳಂಬವನ್ನು ಆಯೋಗವು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಲ್ಲಿಕೆಯಾದ ಆಕ್ಷೇಪಣೆಗಳು ಹಾಗೂ ಅಹವಾಲುಗಳ ಪರಿಶೀಲನೆಗಾಗಿ ಏಪ್ರಿಲ್ 27, 2026 (ಸೋಮವಾರ) ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 1:30 ರವರೆಗೆ ವಿಶೇಷ ‘ಪರಿಶೀಲನಾ ಅದಾಲತ್’ ಅನ್ನು ಆಯೋಜಿಸಲಾಗಿದೆ. ಈ ಅದಾಲತ್ ಪ್ರಕ್ರಿಯೆಯು ಬೆಂಗಳೂರಿನ ಬಹುಮಹಡಿ ಕಟ್ಟಡದ 2ನೇ ಮಹಡಿಯಲ್ಲಿರುವ (ಗೇಟ್-ನಂ-2) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕೊಠಡಿ ಸಂಖ್ಯೆ 229 ಹಾಗೂ 230 ರಲ್ಲಿ ನಡೆಯಲಿದೆ.
ವಿಶೇಷ ಸೂಚನೆ:
ಏಪ್ರಿಲ್ 24 ರೊಳಗೆ ಆಕ್ಷೇಪಣೆ ಸಲ್ಲಿಸಿದವರು ಮಾತ್ರ ಈ ಅದಾಲತ್ನಲ್ಲಿ ಭಾಗವಹಿಸಲು ಅವಕಾಶವಿದ್ದು, ಹಾಜರಾಗಲು ಇಚ್ಛಿಸುವವರು ಕಡ್ಡಾಯವಾಗಿ ಸರ್ಕಾರದಿಂದ ನೀಡಲಾದ ಭಾವಚಿತ್ರವುಳ್ಳ ಮೂಲ (ಒರಿಜಿನಲ್) ಗುರುತಿನ ಚೀಟಿಯನ್ನು ತಮ್ಮೊಂದಿಗೆ ತರತಕ್ಕದ್ದು ಎಂದು ಆಯೋಗದ ನಿರ್ದೇಶಕರು (ಪಂ. ರಾಜ್) ಮತ್ತು ಸದಸ್ಶ ಕಾರ್ಯದರ್ಶಿಗಳಾದ ಡಾ|| ಎನ್. ಸೋಮೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
