ಮಕ್ಕಳ ಮೃದು ಮನಸ್ಸು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಮುಂಡಗೋಡಿನ ಶಿಕ್ಷಕಿ ಭಾರತಿ ನಾಯ್ಕ ಅವರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ.
ಮುಂಡಗೋಡು ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತಿ ನಾಯ್ಕ ಅವರು ಶಿಕ್ಷಕಿಯಾಗಿದ್ದರು. ಶಾಲೆಯಲ್ಲಿ ಶಿಸ್ತು ಕಾಪಾಡಿಕೊಳ್ಳುವುದಕ್ಕಾಗಿ ಅವರು ಮಕ್ಕಳ ಮೇಲೆ ಕೈ ಮಾಡುತ್ತಿದ್ದರು. ಗುರುವಾರ ಕೌಟುಂಬಿಕ ಕಾರಣದಿಂದ ಸಿಟ್ಟು ಮಾಡಿಕೊಂಡಿದ್ದ ಶಿಕ್ಷಕಿ ಭಾರತಿ ನಾಯ್ಕ ಅವರು ಆ ಸಿಟ್ಟನ್ನು ಶಾಲಾ ಮಕ್ಕಳ ಮೇಲೆ ತೋರಿಸಿದ್ದರು.
ಪಾಠ ಓದಲು ಬರಲಿಲ್ಲ ಎಂಬ ಕಾರಣಕ್ಕೆ 2ನೇ ತರಗತಿ ವಿದ್ಯಾರ್ಥಿಯೊಬ್ಬರನ್ನು ಹಿಗ್ಗಾಮುಗ್ಗ ಥಳಿಸಿದ್ದರು. ಶಾಲೆಯಲ್ಲಿ ಇಡೀ ದಿನ ಆ ಮಗು ಅಳುತ್ತಿದ್ದರು ಸಮಾಧಾನ ಮಾಡಿರಲಿಲ್ಲ. ಬದಲಾಗಿ, ಆ ಮಗುವಿನ ಬೆನ್ನಿಗೆ ಬಾಸುಂಡೆ ಬರುವ ರೀತಿ ಇನ್ನಷ್ಟು ಥಳಿಸಿ ನೋವು ಮಾಡಿದ್ದರು. ಮಗುವಿನ ಮೇಲೆ ಕೂಗಾಡಿ ಮಾನಸಿಕವಾಗಿಯೂ ಹಿಂಸಿಸಿದ್ದರು.
ಸoಜೆ ಮನೆಗೆ ಹೋದ ಮಗು ಅಳುತ್ತಿದ್ದು, ಪಾಲಕರಿಗೆ ಸಮಸ್ಯೆ ಬಗ್ಗೆ ಅರಿವಾಯಿತು. ಬಟ್ಟೆ ಬಿಚ್ಚಿ ನೋಡಿದಾಗ ಬೆನ್ನ ಮೇಲೆ ಬಾಸುಂಡೆ ಮೂಡಿದ್ದವು. ಗುರು-ಹಿರಿಯರಿಗೆ ಮಾಹಿತಿ ನೀಡಿದ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ದೂರಿದ್ದರು. ಮಗುವಿಗೆ ಚಿಕಿತ್ಸೆ ನೀಡುತ್ತಲೇ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ ಪಾಲಕರ ಸಭೆ ನಡೆಸಿ ಸಾಂತ್ವಾನ ಹೇಳಿದ್ದರು.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಶಿರಸಿ ಡಿಡಿಪಿಐ ದಯಾನಂದ ನಾಯ್ಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಅಧೀನ ಅಧಿಕಾರಿಗಳಿಂದ ವರದಿ ಸ್ವೀಕರಿಸಿ ಭಾರತಿ ನಾಯ್ಕ ಅವರನ್ನು ಅಮಾನತು ಮಾಡಿದರು. ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಭಾರತಿ ನಾಯ್ಕ ಅವರು `ನಾನೇನು ತಪ್ಪು ಮಾಡಿಲ್ಲ’ ಎನ್ನುತ್ತ ಕಣ್ಣೀರಾದರು. ಮಗುವಿನ ಪಾಲಕರು ಸಹ ಇದೀಗ ಶಿಕ್ಷಕಿ ವಿರುದ್ಧ ಪೊಲೀಸ್ ದೂರು ನೀಡಲು ನಿರ್ಧರಿಸಿದ್ದಾರೆ.
