ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಭಕ್ತರು ಸಿಡಿದೆದ್ದಿದ್ದು, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಧರ್ಮಸ್ಥಳದ ಭಕ್ತರು ವಿರೇಂದ್ರ ಹೆಗ್ಗಡೆ ಅವರನ್ನು ಗುರಿಯಾಗಿರಿಸಿಕೊಂಡು ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದರು. `ಯೂಟೂಬ್ ಹಾಗೂ ಇನ್ನಿತರ ಜಾಲತಾಣದಲ್ಲಿ ಭಕ್ತರ ಭಾವನೆ ಕೆದಕುವ ಪ್ರಯತ್ನ ನಡೆದಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.
`ಅಪಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಬಗ್ಗೆ ತನಿಖೆ ನಡೆಸಬೇಕು. ಜನರ ಧಾರ್ಮಿಕ ಭಾವನೆಗೆ ಧಕ್ಕೆ ಆಗದ ರೀತಿ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು. `ಧರ್ಮಸ್ಥಳದ ವಿರುದ್ಧ ಬಂದ ದೂರಿಗೆ ಎಸ್ಐಟಿ ಸ್ಪಂದಿಸಿದೆ. ಆದರೆ, ಕಳಂಕ ತರಲು ಯತ್ನಿಸಿದವರಿಗೆ ಹಿನ್ನಡೆಯಾಗಿದ್ದು, ಇದು ಕ್ಷೇತ್ರದ ಶಕ್ತಿ’ ಎಂದು ಬಣ್ಣಿಸಿದರು.
ಮಾಜಿ ಶಾಸಕ ಗಂಗಾಧರ ಭಟ್, ಜೆಡಿಎಸ್ ಮುಖಂಡ ಉಪೇಂದ್ರ ಪೈ, ಪ್ರಮೂಕರಾದ ಸೂರಜ ನಾಯ್ಕ, ರಾಜು ಮಾಸ್ತಿಹಳ್ಳ, ಭಾಸ್ಕರ ನಾರ್ವೇಕರ, ಹನುಮಂತ ಗೌಡ ಬೆಳಂಬಾರ ಇತರರು ಜಿಲ್ಲಾಧಿಕಾರಿ ಕಚೇರಿ ಎದುರು ಕಾಣಿಸಿಕೊಂಡರು. ಜನರ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಆ ಮನವಿಯನ್ನು ಸರ್ಕಾರಕ್ಕೆ ರವಾನಿಸುವುದಾಗಿ ಹೇಳಿದರು.
