ಮೊಬೈಲ್ ರಿಪೇರಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಜೊಯಿಡಾದ ಶ್ರೀಕಾಂತ ದೇಸಾಯಿ ಅವರು ಮದುವೆಗೆ ಹೆಣ್ಣು ಸಿಗದ ಕೊರಗಿನಲ್ಲಿಯೇ ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಮಾನಸಿಕ ನೋವಿನಲ್ಲಿ ಮದ್ಯದ ದಾಸರಾಗಿದ್ದ ಅವರು ತಾವು ಕೆಲಸಕ್ಕಿದ್ದ ಮೊಬೈಲ್ ಅಂಗಡಿಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಜೊಯಿಡಾದ ರಾಮನಗರದ ಹನುಮಾನ ಗಲ್ಲಿಯಲ್ಲಿ ಶ್ರೀಕಾಂತ ದೇಸಾಯಿ ಅವರು ತಮ್ಮ ತಾಯಿ ಆನಂದಿ ಅವರ ಜೊತೆ ವಾಸವಾಗಿದ್ದರು. ಆರು ತಿಂಗಳಿನಿoದ ಅವರು ಮನೆಗೆ ಹೋಗದೇ ಮೊಬೈಲ್ ಅಂಗಡಿಯಲ್ಲಿಯೇ ರಾತ್ರಿ ಕಳೆಯುತ್ತಿದ್ದರು. ಶ್ರೀಕಾಂತ ದೇಸಾಯಿ ಅವರ ಸಹೋದರ ಕೃಷ್ಣ ದೇಸಾಯಿ ಅವರು ರಿಕ್ಷಾ ಓಡಿಸಿಕೊಂಡಿದ್ದು, ಅವರೇ ಶ್ರೀಕಾಂತ ದೇಸಾಯಿ ಅವರಿಗೆ ತಮ್ಮ ಮನೆಯಿಂದ ನಿತ್ಯವೂ ಊಟ-ತಿಂಡಿ ತಂದು ಕೊಡುತ್ತಿದ್ದರು.
ಶ್ರೀಕಾಂತ ದೇಸಾಯಿ ಅವರು ಅಂಗವಿಕಲರಾಗಿದ್ದರು. ಜೊತೆಗೆ ಮದ್ಯ ಸೇವನೆ ಚಟಕ್ಕೆ ಬಿದ್ದಿದ್ದರು. ಹೀಗಾಗಿ 40 ವರ್ಷ ಕಳೆದರೂ ಅವರಿಗೆ ಮದುವೆ ಆಗಿರಲಿಲ್ಲ. ಮದುವೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಕನ್ಯೆ ಸಿಕ್ಕಿರಲಿಲ್ಲ. ಇದೇ ನೋವಿನಲ್ಲಿ ಅವರು ಮನೆಗೆ ಹೋಗುವುದನ್ನು ಬಿಟ್ಟಿದ್ದರು. ಮೊಬೈಲ್ ಅಂಗಡಿಯಲ್ಲಿಯೇ ರಾತ್ರಿ ಕಳೆಯುವುದನ್ನು ರೂಢಿಸಿಕೊಂಡಿದ್ದರು.
ಸೆಪ್ಟೆoಬರ್ 9ರಂದು ಬೆಳಗ್ಗೆ ಕೃಷ್ಣ ದೇಸಾಯಿ ಅವರು ತಿಂಡಿ ಕೊಡಲು ಹೋದಾಗ ಮೊಬೈಲ್ ಅಂಗಡಿ ಬಾಗಿಲು ಮುಚ್ಚಿದ್ದರು. ಶ್ರೀಕಾಂತ ದೇಸಾಯಿ ಅವರು ಒಳಗಿರುವ ಮಂಚದ ಮೇಲೆ ಮಲಗಿದ್ದರು. ಕೃಷ್ಣ ದೇಸಾಯಿ ಅವರು ಎಂದಿನAತೆ ಅಂಗಡಿಯ ಶಟರ್ಸ ತೆಗೆದು ಟೇಬಲ್ ಮೇಲೆ ತಿಂಡಿ ಇರಿಸಿ ಬಂದಿದ್ದರು. ಮಧ್ಯಾಹ್ನ 2 ಗಂಟೆ ಅವಧಿಗೆ ಆನಂದಿ ಅವರು ಶ್ರೀಕಾಂತ ದೇಸಾಯಿ ಅವರಿಗೆ ಪದೇ ಪದೇ ಫೋನ್ ಮಾಡಿದರೂ ಮಾತನಾಡಲಿಲ್ಲ. ಹೀಗಾಗಿ ಆನಂದಿ ಅವರು ಕೃಷ್ಣ ದೇಸಾಯಿ ಅವರಿಗೆ ಫೋನ್ ಮಾಡಿದ್ದರು.
ತಾಯಿ ಸೂಚನೆ ಮೇರೆಗೆ ಕೃಷ್ಣ ದೇಸಾಯಿ ಅವರು ಮೊಬೈಲ್ ಅಂಗಡಿಗೆ ಹೋದಾಗ ಅಲ್ಲಿ ಶ್ರೀಕಾಂತ ದೇಸಾಯಿ ಅವರು ಶವವಾಗಿದ್ದರು. ನೈಲಾನ್ ಹಗ್ಗದಿಂದ ಅವರು ನೇಣು ಹಾಕಿಕೊಂಡಿದ್ದು, ಈ ಬಗ್ಗೆ ಕೃಷ್ಣ ದೇಸಾಯಿ ಅವರು ಪೊಲೀಸರಿಗೆ ತಿಳಿಸಿದರು. ರಾಮನಗರ ಪೊಲೀಸರು ಪ್ರಕರಣ ದಾಖಲಿಸಿದರು.
