ಬೀದಿ ವ್ಯಾಪಾರಿಗಳ ಮೇಲೆ ಕಾರವಾರ ನಗರಸಭೆ ದಬ್ಬಾಳಿಕೆ ನಡೆಸುತ್ತಿದ್ದು, ಇದನ್ನು ವಿರೋಧಿಸಿ ವ್ಯಾಪಾರಿಗಳು ಪ್ರತಿಭಟಿಸಿದ್ದಾರೆ. ಈ ಹಿಂದಿನ ಸ್ಥಳದಲ್ಲಿಯೇ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಸೋಮವಾರ ನಗರಸಭೆಯ ಕಚೇರಿ ಮುಂದೆ ಜಮಾಯಿಸಿದ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. `ಈಗಾಗಲೇ ನಗರಸಭೆ ತಮಗೆ ವ್ಯಾಪಾರಕ್ಕೆ ಅನುಮತಿ ನೀಡಿ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಹೀಗಿರುವಾಗ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸಿದ್ದು ಏತಕೆ?’ ಎಂದು ಪ್ರಶ್ನಿಸಿದರು. ನಗರಸಭೆ ಸೂಚಿಸಿದ ಎಂ ಜಿ ರಸ್ತೆಯ ಈಜುಕೊಳದ ಬಳಿ ವ್ಯಾಪಾರ ನಡೆಸುವುದು ಅಸಾಧ್ಯ’ ಎಂದು ತಿಳಿಸಿದರು.
`ಕಾರವಾರದ ವ್ಯಾಪಾರಿಗಳು ಮಾತ್ರವಲ್ಲದೇ ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರು ಇಲ್ಲಿ ಹಣ್ಣು-ತರಕಾರಿ ಮಾರಾಟ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ. ಗಾಂಧಿ ಮಾರುಕಟ್ಟೆ, ಸವಿತಾ ವೃತ್ತ ಮತ್ತು ಶಿವಾಜಿ ವೃತ್ತದ ಬಳಿಯ ವ್ಯವಹಾರದಿಂದ ಅವರು ಜೀವನ ನಡೆಸುತ್ತಿದ್ದಾರೆ. ನಗರಸಭೆಯವರು ಇದೀಗ ಅಭಿವೃದ್ಧಿಯ ಹೆಸರಿನಲ್ಲಿ ಬಡ ಜನರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.
