ದಾಂಡೇಲಿ :
ಕನ್ನಡ ಸಾಹಿತ್ಯ ಪರಿಷತ್ತು ಯಾರ ಗುತ್ತಿಗೆಯು ಅಲ್ಲ, ಅದು ಕನ್ನಡಿಗರ ಸ್ವತ್ತು. ಸರ್ವಾಧಿಕಾರಿ ಧೋರಣೆ ಯಾವುದೇ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಗೌರವ ತರುವಂತಹದ್ದಲ್ಲ. ಕುರ್ಚಿಯಲ್ಲಿ ಕೂತ ಮನುಷ್ಯ ಕುಬ್ಜನಾಗಬಾರದು. ಅದು ಪ್ರಜಾಪ್ರಭುತ್ವದ ಸೊಬಗಲ್ಲ. ಕುರ್ಚಿಗಿಂತ ಮನುಷ್ಯ ದೊಡ್ಡವನಾಗಿರಬೇಕು ಎಂಬುವುದೇ ಪ್ರಜಾಪ್ರಭುತ್ವದ ನಿಜವಾದ ಮೌಲ್ಯ. ಇವತ್ತು ಏನಾದರೂ ಕನ್ನಡ ಉಳಿದರೇ ಅದು ಸಾಮಾನ್ಯ ಕನ್ನಡಿಗರದಿಂದ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಸಾಮಾನ್ಯ ಕನ್ನಡಿಗರಿಗೆ ಕನ್ನಡ ಬದುಕಿನ ಭಾಷೆಯಾಗಿದೆ. ಕನ್ನಡವನ್ನು ಉಳಿಸಿ ಬೆಳೆಸಿದವರು ಸಾಮಾನ್ಯ ಕನ್ನಡಿಗರು ಎನ್ನುವುದನ್ನು ನಾವು ನೀವೆಲ್ಲರೂ ಹೃದಯದಿಂದ ಒಪ್ಪಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಮಾನ್ಯ ಕನ್ನಡಿಗರ ಭಾವನೆಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಪ್ರತಿಯೊಬ್ಬ ಕನ್ನಡಿಗನಿಂದ ಸದಾ ಆಗಬೇಕೆಂದು ನಾಡಿನ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ನುಡಿದರು.
ಅವರು ಶನಿವಾರ ದಾಂಡೇಲಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಮಾನ್ಯ ಜನರ ಮೇಲೆ ನಂಬಿಕೆ ಇಟ್ಟುಕೊಂಡವರು ಶಕ್ತಿಯುತವಾಗಿ ಬೆಳೆಯಬಲ್ಲರು. ಕನ್ನಡವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಆಡಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ. ಅಳಿಸಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿಯು ಕನ್ನಡಕ್ಕಿದೆ. ಆ ಕಾರಣಕ್ಕಾಗಿಯೇ ಕನ್ನಡದ ಸಂವೇದನೆಗಳಲ್ಲಿ ಮತ್ತು ಆಶಯಗಳಲ್ಲಿರುವ ಮೌಲ್ಯಗಳನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಅವರು ಈ ಜಿಲ್ಲೆಯ ಹೆಮ್ಮೆಯ ಸಾಧಕ ವಿಠ್ಠಲ ಭಂಡಾರಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ವಾಸರೆಯವರ ನೇತೃತ್ವದಲ್ಲಿ ನಿರೀಕ್ಷೆಗೂ ಮೀರಿ ಅದ್ಭುತವಾಗಿ ಅವಿಸ್ಮರಣೀಯವಾಗಿ ದಾಂಡೇಲಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿರುವುದು ನನಗಂತೂ ಅತೀವ ಸಂತಸ ತಂದಿದೆ ಎಂದು ಸಮ್ಮೇಳನದ ಆಯೋಜನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
