ಶಿರಸಿಯಲ್ಲಿ ನಡೆದಿದ್ದ ಕುಡಿಯುವ ನೀರಿನ ಕಬ್ಬಿಣದ ಪೈಪು ಕಳ್ಳತನ ಪ್ರಕರಣದಲ್ಲಿ ಮೂವರು ಅಧಿಕಾರಿಗಳು ಹಾಗೂ ಮೂವರು ಜನಪ್ರತಿನಿಧಿಗಳು ನೇರವಾಗಿ ಭಾಗಿಯಾಗಿದ್ದಾರೆ. ತನಿಖೆ ಕೈಗೊಂಡವರಿಗೆ ಈ ಬಗ್ಗೆ ಖಚಿತ ದಾಖಲೆ ಸಿಕ್ಕಿದ್ದು, ಅವರೆಲ್ಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಿರಸಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ಕೇಂಗ್ರೆ ಹೊಳೆಯಿಂದ 1969ರಲ್ಲಿ ಕಬ್ಬಿಣದ ಪೈಪ್ಲೈನ್ ಅಳವಡಿಸಲಾಗಿತ್ತು. ಸದ್ಯ ಹೊಸದಾಗಿ ಪೈಪ್ ಅಳವಡಿಕೆ ಕಾರ್ಯ ನಡೆದಿದ್ದು, ಹಳೆಯ ಪೈಪುಗಳು ಕಳ್ಳತನವಾಗಿದ್ದವು. ನಗರಸಭೆ ಅಧಿಕಾರಿ ಸುಫಿಯಾನ್ ಅಹಮದ್ ಬ್ಯಾರಿ ಕಬ್ಬಿಣದ ಪೈಪ್ ಕಳ್ಳತನ ವಿಷಯವಾಗಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಸುಫಿಯಾನ್ ಅಹಮದ್ ಬ್ಯಾರಿ ಸಹ ಆರೋಪಿಯಾಗಿರುವುದು ಅರಿವಿಗೆ ಬಂದಿತು. ಇದರೊಂದಿಗೆ ನಗರಸಭೆ ಪೌರಾಯುಕ್ತ ಕಾಂತರಾಜು ಹಾಗೂ ಅಲ್ಲಿನ ಅಧಿಕಾರಿ ಪ್ರಶಾಂತ ವರ್ಣೇಕರ್ ಸಹ ಕಬ್ಬಿಣ್ಣ ಕಳ್ಳತನಕ್ಕೆ ಸಹಕರಿಸಿ ಅದರಲ್ಲಿ ತಮ್ಮ ಪಾಲು ಪಡೆದಿದ್ದರು.
ಇನ್ನೂ ಹಳೆಯ ಕಬ್ಬಿಣ ಕಳ್ಳತನದಿಂದ ಮಾರಾಟ ಮಾಡಲು ಶಿರಸಿ ನಗರಸಭೆ ಮಾಜಿ ಅಧ್ಯಕ್ಷರೂ ಆಗಿರುವ ಹಾಲಿ ಸದಸ್ಯ ಗಣಪತಿ ನಾಯ್ಕ ಯೋಜನೆ ರೂಪಿಸಿದ್ದರು. ನಗರಸಭೆ ಸದಸ್ಯ ಕುಮಾರ ಬೋರ್ಕರ್ ಹಾಗೂ ಯಶ್ವಂತ ಮರಾಠೆ ಶಿವಮೊಗ್ಗದ ಜಿಕ್ರಿಯಾ ಸಯ್ಯದ್ ಮೂಲಕ ಆ ಕಬ್ಬಿಣವನ್ನು ಅವರು ಮಾರಾಟ ಮಾಡಿದ್ದರು. ಅಂದಾಜು 21 ಲಕ್ಷ ರೂ ಮೌಲ್ಯದ ಕಬ್ಬಿಣ ಹಾಗೂ ಬೀಡ್ ಮಿಶ್ರಿತ ಪೈಪುಗಳು ಅದಾಗಿದ್ದು, ಕಬ್ಬಿಣ ಮಾರಾಟದ ಹಣವನ್ನು ಜಿಕ್ರಿಯಾ ಸಯ್ಯದ್ ಅವರು ಯಶ್ವಂತ ಮರಾಠೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಮೊದಲು ಗುಜುರಿ ವ್ಯಾಪಾರಿಯಾಗಿರುವ ಶಿಕಾರಿಪುರದ ಜಕ್ರಿಯಾ ಸಯ್ಯದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಪಡೆದಿದ್ದ ಟೆಂಡರಿನಲ್ಲಿ ನಷ್ಟವಾದ ಕಾರಣ ಅಧಿಕಾರಿ-ಜನಪ್ರತಿನಿಧಿಗಳ ಸೂಚನೆ ಮೇರೆಗೆ ಕಬ್ಬಿಣ ಕದ್ದೊಯ್ದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಬಂಧನದ ವೇಳೆ ಎದೆನೋವು ಕಾಣಿಸಿಕೊಂಡಿದ್ದರಿAದ ಪೊಲೀಸರು ಅವರನ್ನು ಬಿಟ್ಟಿದ್ದು, ನಂತರ ಜಕ್ರಿಯಾ ಸಯ್ಯದ್ ಜಾಮೀನುಪಡೆದಿದ್ದಾರೆ. ತಮ್ಮ ಹೆಸರು ಬಹಿರಂಗವಾದ ಹಿನ್ನಲೆ ಆರೋಪಿತ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಜಾಮೀನುಪಡೆದಿದ್ದಾರೆ. ಕದ್ದ ಕಬ್ಬಿಣವನ್ನು ಪುಡಿ ಮಾಡಿ ಮಾರಾಟ ಮಾಡಿದ ನಂತರ ಗುಜುರಿ ವ್ಯಾಪಾರಿ ಜಕ್ರಿಯಾ ಸಯ್ಯದ್ ಅವರು ನಗರಸಭೆ ಸದಸ್ಯ ಯಶ್ವಂತ ಮರಾಠೆ ಖಾತೆಗೆ ಹಣ ಹಾಕಿದ್ದಾರೆ. ಅದಾಗಿಯೂ 7 ಲಕ್ಷ ರೂ ಮೌಲ್ಯದ ಕಬ್ಬಿಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಕಬ್ಬಿಣ್ಣ ಕಳ್ಳತನಕ್ಕೆ ಬಳಸಿದ್ದ ಎರಡು ಲಾರಿಯನ್ನು ಪೊಲೀಸರು ವಶಕ್ಕೆಪಡೆದು, ನ್ಯಾಯಾಲಯದ ಸೂಚನೆ ಮೇರೆಗೆ ಅದನ್ನು ಮಾಲಕರಿಗೆ ಮರಳಿಸಿದ್ದಾರೆ. ಆರೋಪಿತ ಅಧಿಕಾರಿ ಹಾಗೂ ನಗರಸಭೆ ಸದಸ್ಯರು ಸಾರ್ವಜನಿಕ ಸೇವೆಯಲ್ಲಿದ್ದು ಕಬ್ಬಿಣ ಕದ್ದ ಕಾರಣ ಅವರ ವಿರುದ್ಧ ತನಿಖೆ ಮುಂದುವರೆದಿದೆ. ಪೊಲೀಸ್ ಅಧಿಕಾರಿ ಮಂಜುನಾಥ ಗೌಡ ತನಿಖೆ ನಡೆಸುತ್ತಿದ್ದಾರೆ.
