`ಸರಿಯಾಗಿ ಓದಲು ಬರುವುದಿಲ್ಲ’ ಎಂಬ ಕಾರಣಕ್ಕೆ ಮುಂಡಗೋಡಿನ ಶಿಕ್ಷಕಿ ಭಾರತಿ ನಾಯ್ಕ ಅವರು 2ನೇ ತರಗತಿ ಮಗುವಿಗೆ ಥಳಿಸಿದ್ದಾರೆ. ಪರಿಣಾಮ ಬಾಲಕನ ಬೆನ್ನ ಮೇಲೆ ಬಾಸುಂಡೆ ಬಂದಿದ್ದು, ಕೂರಲೂ ಆಗದೇ-ಮಲಗಲು ಆಗದ ಸ್ಥಿತಿಯಲ್ಲಿರುವ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಿದ್ದಾರೆ.
ಮುಂಡಗೋಡು ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತಿ ನಾಯ್ಕ ಅವರು ಪಾಠ ಮಾಡುತ್ತಾರೆ. ಆ ಶಾಲೆಯಲ್ಲಿ ಶಿಸ್ತು ಕಾಪಾಡಿಕೊಂಡಿರುವ ಶಿಕ್ಷಕಿ ಮಕ್ಕಳಿಗೆ ಹೊಡೆದಿದ್ದು ಇದೇ ಮೊದಲಲ್ಲ. ಆದರೆ, ಬಾಸುಂಡೆ ಬರುವಂತೆ ಹೊಡೆದ ವಿಷಯ ಹೊರಗೆ ಬಂದಿದ್ದು ಇದೇ ಮೊದಲು. `ಕಲಿಸಿದ್ದನ್ನು ಸರಿಯಾಗಿ ಕಲಿಯುವುದಿಲ್ಲ. ಸರಿಯಾಗಿ ಬರೆಯುವುದಿಲ್ಲ’ ಎಂದು ಮಗುವಿನ ಮೇಲೆ ಕೂಗಾಡಿದ ಭಾರತಿ ನಾಯ್ಕ ಅವರು ಕೋಲಿನಿಂದ ನಿರಂತರವಾಗಿ ಹೊಡೆದಿದ್ದಾರೆ.
ಗುರುವಾರ ಸಂಜೆ ಆ ವಿದ್ಯಾರ್ಥಿ ಮನೆಗೆ ಹೋಗಿ ಬಟ್ಟೆ ತೆಗೆದಾಗ ಬೆನ್ನ ಮೇಲೆ ಬಾಸುಂಡೆ ಬಂದಿರುವುದು ಗೊತ್ತಾಗಿದೆ. ನೋವು ತಾಳಲಾರದೇ ವಿದ್ಯಾರ್ಥಿ ಅಳುತ್ತಿದ್ದು, ಪಾಲಕರು ಶಿಕ್ಷಕಿಯ ಬಗ್ಗೆ ಊರಿನ ಹಿರಿಯರಿಗೆ ತಿಳಿಸಿದ್ದಾರೆ. ಅದಾದ ನಂತರ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ ಜಿ ಅವರು ಶಾಲೆಗೆ ಭೇಟಿ ನೀಡಿ ಸಭೆ ನಡೆಸಿದ್ದು, ಶಿಕ್ಷಕಿ ಭಾರತಿ ನಾಯ್ಕ ಈ ವೇಳೆ ತಪ್ಪು ಒಪ್ಪಿಕೊಂಡರು. `ತಾನು ಮಗುವಿನ ಒಳ್ಳೆಯದಕ್ಕೆ ಹೊಡೆದಿದ್ದೇನೆ’ ಎಂದು ಶಿಕ್ಷಕಿ ಹೇಳಿದಾಗ ಊರಿನವರು ಆಕ್ರೋಶವ್ಯಕ್ತಪಡಿಸಿದರು. ನಂತರ `ತಾನು ಉದ್ದೇಶಪೂರ್ವಕವಾಗಿ ಹೊಡೆದಿಲ್ಲ’ ಎಂದು ಭಾರತಿ ನಾಯ್ಕ ಸಮರ್ಥಿಸಿಕೊಂಡರು. ಕೊನೆಗೆ ಕ್ಷಮೆ ಯಾಚಿಸಿದರು. `ಮಕ್ಕಳ ಮೇಲೆ ಕೈ ಮಾಡದಂತೆ ಶಿಕ್ಷಕರಿಗೆ ಸೂಚನೆ ನೀಡುವೆ’ ಎಂದು ಶಿಕ್ಷಣಾಧಿಕಾರಿ ಪ್ರಕರಣ ಮುಗಿಸಿದರು.
