ಕಾರವಾರ:
ದೆಹಲಿಯ ಕೆಂಪು ಕೋಟೆಯ ಬಳಿ ಸೋಮವಾರ ಸಂಜೆ ನಡೆದ ಕಾರ್ ಬ್ಲಾಸ್ಟ್ ಹಿನ್ನಲೆ ಎಲ್ಲೆಡೆ ಹೈ ಅಲರ್ಟ್ ಇದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತಿದೆ.
ಮಂಗಳವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಜನಸಂದಣಿ ಇರುವ ಪ್ರದೇಶಗಳನ್ನು ಶ್ವಾನ ದಳ ಹಾಗೂ ಮೆಟೆಲ್ ಡಿಟೆಕ್ಟರ್ ಬಳಸಿ ತಪಾಸಣೆ ನಡೆಸಲಾಗುತ್ತಿದೆ. ಕಾರವಾರದಲ್ಲಿ ಕದಂಬ ನೌಕಾನೆಲೆ ಕೂಡ ಇರುವ ಕಾರಣ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ.
ಪೊಲೀಸ್ ಸಿಬ್ಬಂದಿ ಹಾಗೂ ಶ್ವಾನದಳವು ಕಾರವಾರ, ಗೋಕರ್ಣ, ಮುರಡೇಶ್ವರ ಹಾಗೂ ಭಟ್ಕಳದ ರೈಲ್ವೆ ನಿಲ್ದಾಣಗಳು ಹಾಗೂ ಕಾರವಾರದ ಜಿಲ್ಲಾ ನ್ಯಾಯಾಲಯ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ಹಾಗೂ ಮುರಡೆಶ್ವರದ ದೇವಸ್ಥಾನಗಳಲ್ಲಿ ತಪಾಸಣೆ ನಡೆಸಲಾಗಿದೆ. ಅಲ್ಲದೇ ಗೋವಾ ರಾಜ್ಯದ ಗಡಿ ಭಾಗವೂ ಆಗಿರುವ ಕಾರಣ ಮಾಜಾಳಿಯ ಚೆಕ್ ಪೋಸ್ಟಿನಲ್ಲಿ ಹೆಚ್ಚಿನ ಸಿಬ್ಬಂದಿಯಿಂದ ತಪಾಸಣೆ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಗಳು, ಕಾರು, ಬಸ್ ಹಾಗೂ ಟ್ರಕ್ ಸೇರಿದಂತೆ ಎಲ್ಲಾ ರಿತಿಯ ವಾಹನಗಳನ್ನು ಹೆಚ್ಚಿನ ತಪಾಸನೆಗೆ ಒಳಪಡಿಸಲಾಗುತ್ತಿದೆ. ಮಳೆಗಾಲದ ಬಳಿಕ ಕಾರವಾರದ ಬಂದರಿಗೆ ಬರುವ ಎಲ್ಲಾ ಹಡಗುಗಳನ್ನು ತಪಾಸನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
