ಶಿರಸಿ: ಹೈವೇ ವಿಚಾರಕ್ಕೆ ಭುಗಿಲೆದ್ದ ಆಕ್ರೋಶ – ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತಿನ ಯುದ್ಧ
ಶಿರಸಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಹೈಡ್ರಾಮಾಕ್ಕೆ ವೇದಿಕೆಯಾಯಿತು. ಶಿರಸಿ–ಹಾವೇರಿ ಹೈವೇ ಕಾಮಗಾರಿ ವಿಚಾರವಾಗಿ ಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲ ಉಂಟಾಗಿ ಮಾತಿನ ಯುದ್ಧವೇ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಸುನೀಲ್ ನಾಯ್ಕ ಅವರು ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹೈವೇ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಜನರು ಬದುಕಿಗಾಗಿ ಹೋರಾಟ ಮಾಡುವ ಸ್ಥಿತಿಗೆ ಬಂದಿದ್ದಾರೆ, ನೆಮ್ಮದಿಯಿಂದ ಬದುಕಲು ಅವಕಾಶ ನೀಡಿ ಎಂದು ಅವರು ಆಕ್ರಂದನ ವ್ಯಕ್ತಪಡಿಸಿದರು.
ಶಿರಸಿ–ಹಾವೇರಿ ಹೈವೇ ಕಾಮಗಾರಿ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ ಸುನೀಲ್ ನಾಯ್ಕ, “ನಮ್ಮ ಗೋಳು ಕೇಳೋರಿಲ್ಲ, ಕಾಮಗಾರಿ ಯಾವಾಗ ಪೂರ್ಣಗೊಳ್ಳುತ್ತದೆ?” ಎಂದು ಪ್ರಶ್ನಿಸಿದರು. ಇದಕ್ಕೆ ಶಾಸಕ ಹೆಬ್ಬಾರ್ ಸಮರ್ಪಕ ಉತ್ತರ ನೀಡಲು ವಿಫಲರಾದರು ಎಂಬ ಆರೋಪ ಕೇಳಿಬಂದಿದೆ.
ಇದೇ ವೇಳೆ ಬನವಾಸಿ ಗ್ರಿಡ್ ಯೋಜನೆ ಕುರಿತಾಗಿ ಕೂಡ ಅಸಮಾಧಾನ ವ್ಯಕ್ತವಾಯಿತು. 13 ವರ್ಷಗಳ ಹಿಂದೆ ಭೂಮಿಪೂಜೆಗೊಂಡು ನಾಲ್ಕು ವರ್ಷಗಳ ಹಿಂದೆ ಉದ್ಘಾಟನೆಯಾದರೂ ಇನ್ನೂ ವಿದ್ಯುತ್ ಸೌಲಭ್ಯ ಲಭ್ಯವಾಗಿಲ್ಲ ಎಂದು ರೈತರ ಸಮಸ್ಯೆಗಳನ್ನು ಸುನೀಲ್ ನಾಯ್ಕ ಎತ್ತಿಹಿಡಿದರು. ಏತ ನೀರಾವರಿ ಯೋಜನೆಯಿಂದ ಕೂಡಾ ಒಂದು ಹನಿ ನೀರು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ NHAI ಅಧಿಕಾರಿಗಳು ಗೈರಾಗಿದ್ದುದನ್ನು ಪ್ರಶ್ನಿಸಿದ ಸುನೀಲ್ ನಾಯ್ಕ, “ಇದು ಯಾವ ರೀತಿಯ ಪ್ರಗತಿ ಪರಿಶೀಲನಾ ಸಭೆ?” ಎಂದು ತೀವ್ರವಾಗಿ ಪ್ರಶ್ನಿಸಿ ಅಧಿಕಾರಿಗಳಿಗೆ ಬೆವರಿಳಿಸಿದರು.
ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ ಶಾಸಕ ಹೆಬ್ಬಾರ್, “NHAI ನಮ್ಮ ಅಧೀನದಲ್ಲಿಲ್ಲ, ಸಂಸದರನ್ನು ಪ್ರಶ್ನಿಸಿ” ಎಂದು ಹೇಳಿ ಹೊಣೆ ತಪ್ಪಿಸಿಕೊಂಡರು ಎನ್ನಲಾಗಿದೆ.
ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸುನೀಲ್ ನಾಯ್ಕ ಸಭೆಯಿಂದ ಹೊರನಡೆದ ಘಟನೆ ಗಮನ ಸೆಳೆದಿದೆ.
