ದಾಂಡೇಲಿ:
ತಾಲೂಕಿನ ಕುಳಗಿ ರಸ್ತೆಯಲ್ಲಿರುವ ಕಾಳಿ ನದಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮೊಸಳೆ ದಾಳಿ ನಡೆಸಿದ ಘಟನೆ ರವಿವಾರ ಬೆಳಗ್ಗೆ ಸಂಭವಿಸಿದೆ.
ಸ್ಥಳೀಯ ನಿವಾಸಿ ಆನಂದ್ ನಲ್ಲೂಜಿ ಅವರು ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಶೌಚಕ್ಕಾಗಿ ನದಿಯತ್ತ ತೆರಳಿದ್ದ ವೇಳೆ ಏಕಾಏಕಿ ಮೊಸಳೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ಸಮಯದಲ್ಲಿ ಆನಂದ್ ಅವರು ಸಹಾಯಕ್ಕಾಗಿ ಕೂಗಿದ ಶಬ್ದವನ್ನು ಕೇಳಿದ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಈ ವೇಳೆ ಅವರ ಕಾಲಿಗೆ ತೀವ್ರ ಗಾಯವಾಗಿದ್ದು, ದೇಹದ ಇತರೆ ಭಾಗಗಳಲ್ಲೂ ಗಾಯಗಳಾಗಿವೆ.
ಗಾಯಗೊಂಡ ಆನಂದ್ ಅವರನ್ನು ತಕ್ಷಣವೇ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಧಾರವಾಡಿಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಈ ಪ್ರದೇಶದಲ್ಲಿ ಮೊಸಳೆ ದಾಳಿಗಳು ಕಡಿಮೆಯಾಗಿದ್ದರೂ, ಇತ್ತೀಚಿನ ಘಟನೆ ಸ್ಥಳೀಯರಲ್ಲಿ ಮತ್ತೆ ಭೀತಿ ಮತ್ತು ಆತಂಕವನ್ನು ಹೆಚ್ಚಿಸಿದೆ.
