ಭಟ್ಕಳ: ಸ್ಕೂಟಿಯಲ್ಲಿ ಗಾಂಜಾ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಆತನಿಂದ 81,600 ರೂ. ಮೌಲ್ಯದ 816 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟಿಯನ್ನು ಜಪ್ತಿ ಮಾಡಿದ್ದಾರೆ.
ಬಂಧಿತನನ್ನು ಭಟ್ಕಳದ ಬೆಂಡೆಖಾನ್, ಮೂಸಾನಗರದ ಸಾಯಿಮ್ ಮಂಜಿಲ್ ನಿವಾಸಿ ಮೊಹಮ್ಮದ್ ಸಾಯಿಮ್ ಮೊಹಮ್ಮದ್ ಸಲೀಂ ಖಾಜಿಯಾ (31) ಎಂದು ಗುರುತಿಸಲಾಗಿದೆ.
ಅ.2ರಂದು ಸಂಜೆ 6.30ರ ಸುಮಾರಿಗೆ ಹೆಬಳೆ ಗ್ರಾಮದ ಫಿರ್ದೋಸ್ ನಗರದ ಕೋಳಿ ಫಾರ್ಮ್ ಬಳಿ ಆರೋಪಿಯು ಬರ್ಗಮನ್ ಸ್ಕೂಟಿ (KA-19 HL-1941)ಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪಂಚರೊಂದಿಗೆ ಸ್ಥಳಕ್ಕೆ ತೆರಳಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪರಿಶೀಲನೆ ವೇಳೆ ಆತನ ಬಳಿಯಿದ್ದ 816 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅದರ ಅಂದಾಜು ಮೌಲ್ಯ 81,600 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಬಳಸಿದ್ದ ಸ್ಕೂಟಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯ ಕಲಂ 8(ಸಿ), 20(ಬಿ)2(ಎ) ಅಡಿಯಲ್ಲಿ ಅಪರಾಧ ಕ್ರಮಾಂಕ 227/2026 ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ದಸ್ತಗಿರಿ ನಿಯಮಗಳಂತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ. ಹಾಗೂ ಭಟ್ಕಳ ಉಪವಿಭಾಗದ ಎಎಸ್ಪಿ ರಾನು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ವೆಂಕಟೇಶ್ ಮೂರ್ನಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಿಎಸ್ಐಗಳಾದ ಮಲ್ಲಿಕಾರ್ಜುನ್ ಕೊರಾಣಿ, ಭರ್ಮಪ್ಪ ಬೆಳಗಲಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಂಡವನ್ನು ಶ್ಲಾಘಿಸಿದ್ದಾರೆ.
