ದಾಂಡೇಲಿ: ಗಾಂಧಿ ಜಯಂತಿ ಅಂಗವಾಗಿ ದಾಂಡೇಲಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವತಿಯಿಂದ ನಗರದ ಬರ್ಚಿ ರಸ್ತೆಯ ಬಂಗೂರನಗರ ಜೂನಿಯರ್ ಕಾಲೇಜು ಬಳಿಯ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಹಾಗೂ ಲಿಯೋ ಕ್ಲಬ್ ಸದಸ್ಯರು ಒಗ್ಗೂಡಿ ಬಸ್ ನಿಲ್ದಾಣದಲ್ಲಿದ್ದ ಕಸ, ಧೂಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಹಲವಾರು ದಿನಗಳಿಂದ ಸ್ವಚ್ಛತೆಯ ಕೊರತೆಯಿಂದ ಅವ್ಯವಸ್ಥೆಯಿಂದ ಕೂಡಿದ್ದ ಬಸ್ ನಿಲ್ದಾಣ ಇದೀಗ ಸ್ವಚ್ಛಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಅನುಕೂಲವಾಗಿದೆ.
ಸಾಮಾಜಿಕ ಕಾಳಜಿಯಿಂದ ಕೈಗೊಂಡ ಈ ಕಾರ್ಯಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ಶೆಟ್ಟಿ, ಕಾರ್ಯದರ್ಶಿ ಮೂರಳಿ ನಾಯ್ಕ, ಖಜಾಂಚಿ ಗಣೇಶ ಖಾನಾಪುರಿ, ಪ್ರಮುಖರಾದ ಅನಿಲ ದಂಡಗಲ್, ಡಾ. ಶೇಖರ ಹಂಚಿನಾಳ, ಇಮ್ತಿಯಾಜ್, ಚೇತನ ಕುಮಾರಮಠ ಸೇರಿದಂತೆ ಲಿಯೋ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
