ಕಾರವಾರ: ರಾಜ್ಯವ್ಯಾಪಿ ಪ್ರತಿಭಟನಾ ಸಪ್ತಾಹದ ಅಂಗವಾಗಿ, ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹15,000 ಮಾಸಿಕ ವೇತನ ನಿಗದಿಪಡಿಸಬೇಕು ಹಾಗೂ ‘ಸಮಸ್ತ’ ಆ್ಯಪ್ ಮೂಲಕ ಕೆಲಸ ಮಾಡಲು ಬಲವಂತ ಮಾಡಬಾರದು ಎಂದು ಆಗ್ರಹಿಸಿ ಕಾರವಾರದ ಜಿಲ್ಲಾ ಪಂಚಾಯತ್ ಸಿಇಒ ಕಚೇರಿ ಎದುರು ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಕಳೆದ 9 ವರ್ಷಗಳಲ್ಲಿ ಗೌರವಧನ ಕೇವಲ 1,500 ಮಾತ್ರ ಹೆಚ್ಚಾಗಿದ್ದು, ಬೆಲೆ ಏರಿಕೆಯ ನಡುವೆ ಬಡ ಕುಟುಂಬಗಳು ಬೀದಿಪಾಲಾಗುತ್ತಿವೆ ಎಂದು ಅಳಲು ತೋಡಿಕೊಂಡರು. ಕಳೆದ ಒಂದು ವರ್ಷದಿಂದ ಪ್ರೋತ್ಸಾಹ ಧನ ಮತ್ತು ಗೌರವಧನ ಸರಿಯಾದ ಸಮಯಕ್ಕೆ ಸಿಗದೆ ತೀವ್ರ ಸಂಕಷ್ಟ ಎದುರಾಗಿದೆ ಎಂದರು. ಅಲ್ಲದೆ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ‘ಸಮಸ್ತ’ ಆ್ಯಪ್ ಮೂಲಕ ಕೆಲಸ ಮಾಡಲು ಬಲವಂತವಾಗಿ ಕಿರುಕುಳ ನೀಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆಕುಕ ಅಧಿಕಾರಿ ಡಾ. ಸಂಜಯ್ ದೊಡ್ಮನಿ ಹಾಗೂ ಜಿ.ಪಂ ಉಪಕಾರ್ಯದರ್ಶಿ ಅಲ್ಲಾಭಕಾಶ್, ಆ್ಯಪ್ ಮೂಲಕ ಕೆಲಸ ಮಾಡಲು ಯೂ ಒತ್ತಾಯಿಸದಂತೆ ನಿರ್ದೇಶನ ನೀಡುವುದಾಗಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಪದ್ಮಾ ಚಲುವಾದಿ ಸೇರಿದಂತೆ ನೂರಾರು ಕಾರ್ಯಕರ್ತೆಯರು ಉಪಸ್ಥಿತರಿದ್ದರು.
