ಕಾರವಾರ: ಸಮುದ್ರದ ಅಲೆಗಳ ನಡುವೆ ಸಾಮಾನ್ಯ ಹಡಗುಗಳಂತೆ ಸಾಗದೆ, ನೀರಿನ ಮೇಲ್ಮೈಯಿಂದಲೇ ತೇಲುತ್ತಾ ಚಲಿಸುವ ಕೋಸ್ಟ್ಗಾರ್ಡ್ನ ಎರಡು ಹೋವರ್ಕ್ರಾಫ್ಟ್ಗಳು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರ ಗಮನ ಸೆಳೆದಿವೆ. ಗೋವಾದಿಂದ ಬಂದಿರುವ ಈ ನೌಕೆಗಳು ಕಡಲತೀರದಲ್ಲಿ ನಿಂತಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಕೋಸ್ಟ್ಗಾರ್ಡ್ನ ಉನ್ನತಾಧಿಕಾರಿಯೊಬ್ಬರು ಕಾರವಾರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಈ ಹೋವರ್ಕ್ರಾಫ್ಟ್ಗಳನ್ನು ತರಲಾಗಿದೆ ಎನ್ನಲಾಗುತ್ತಿದ್ದು, ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ. ಸಾಮಾನ್ಯವಾಗಿ ಕರಾವಳಿ ಗಸ್ತು, ಕಣ್ಗಾವಲು, ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಅಕ್ರಮ ಚಟುವಟಿಕೆಗಳ ತಡೆಗೆ ಇವುಗಳನ್ನು ಬಳಸಲಾಗುತ್ತದೆ.
ಹೋವರ್ಕ್ರಾಫ್ಟ್ಗಳನ್ನು ‘ಏರ್ ಕುಶನ್ ವೆಹಿಕಲ್’ ಎಂದು ಕರೆಯಲಾಗುತ್ತದೆ. ನೌಕೆಯ ಕೆಳಭಾಗದಲ್ಲಿ ಹೆಚ್ಚಿನ ಒತ್ತಡದ ಗಾಳಿಯ ಪದರವನ್ನು ಸೃಷ್ಟಿಸಿ, ರಬ್ಬರ್ನಂತಹ ಸ್ಕರ್ಟ್ ವ್ಯವಸ್ಥೆಯ ನೆರವಿನಿಂದ ಮೇಲ್ಮೈಯಿಂದ ಸ್ವಲ್ಪ ಎತ್ತರದಲ್ಲಿ ತೇಲುವಂತೆ ಮಾಡಲಾಗುತ್ತದೆ. ಇದರಿಂದ ಘರ್ಷಣೆ ಕಡಿಮೆಯಾಗಿ ಹೆಚ್ಚಿನ ವೇಗದಲ್ಲಿ ಸಂಚರಿಸಲು ಸಾಧ್ಯವಾಗುತ್ತದೆ. ನೀರಿನ ಜೊತೆಗೆ ಕಡಿಮೆ ಆಳದ ಪ್ರದೇಶ, ಕೆಸರು, ಜವುಗು ಹಾಗೂ ಮರಳಿನ ಮೇಲೂ ಸಂಚರಿಸುವ ಸಾಮರ್ಥ್ಯ ಹೊಂದಿರುವುದು ಇದರ ಪ್ರಮುಖ ವಿಶೇಷತೆ.
ಕರಾವಳಿ ಗಸ್ತು, ಕಣ್ಗಾವಲು, ತಡೆ ಕಾರ್ಯಾಚರಣೆ, ಶೋಧ ಮತ್ತು ರಕ್ಷಣಾ ಕಾರ್ಯಗಳಲ್ಲಿ ಹೋವರ್ಕ್ರಾಫ್ಟ್ಗಳು ಉಪಯುಕ್ತವಾಗಿವೆ. ಕೋಸ್ಟ್ಗಾರ್ಡ್ನ ಹಿಂದಿನ ತಲೆಮಾರಿನ ಕೆಲವು ACVಗಳು ಸುಮಾರು 20 ಮೀಟರ್ ಉದ್ದ ಹೊಂದಿದ್ದು, ಗಂಟೆಗೆ ಸುಮಾರು 90 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದವು.
ಕಾರವಾರ ಈಗಾಗಲೇ ಕರಾವಳಿ ಭದ್ರತೆಯ ಪ್ರಮುಖ ಕೇಂದ್ರವಾಗಿದ್ದು, ಅರ್ಗಾದಲ್ಲಿ ಕೋಸ್ಟ್ಗಾರ್ಡ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಅಮದಳ್ಳಿಯಲ್ಲಿ ಕೋಸ್ಟ್ಗಾರ್ಡ್ಗಾಗಿ ಪ್ರತ್ಯೇಕ ಕಚೇರಿ ಹಾಗೂ ಮೂಲಸೌಕರ್ಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೆಲ ವರ್ಷಗಳ ಹಿಂದೆ ದಿವೇಕರ ಕಾಲೇಜು ಸಮೀಪ ಕೋಸ್ಟ್ಗಾರ್ಡ್ ಕಚೇರಿ ಹಾಗೂ ಹೋವರ್ಕ್ರಾಫ್ಟ್ ಇಳಿದಾಣ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ವಿರೋಧದ ಬಳಿಕ ಅಮದಳ್ಳಿ ಭಾಗದಲ್ಲಿ ಕಚೇರಿ ನಿರ್ಮಾಣದ ಪ್ರಕ್ರಿಯೆ ಮುಂದುವರಿದಿದೆ.
ಇದೀಗ ಒಂದೇ ಸಮಯದಲ್ಲಿ ಎರಡು ಹೋವರ್ಕ್ರಾಫ್ಟ್ಗಳು ಕಾರವಾರದ ಕಡಲತೀರದಲ್ಲಿ ಕಾಣಿಸಿಕೊಂಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇದು ಉನ್ನತಾಧಿಕಾರಿಯ ಭೇಟಿ ಹಿನ್ನೆಲೆಯಲ್ಲಿ ನಡೆದ ವಿಶೇಷ ಸಿದ್ಧತೆಯೇ ಅಥವಾ ನಿಯಮಿತ ಕಾರ್ಯಾಚರಣೆಯ ಭಾಗವೇ ಎಂಬುದು ಸ್ಪಷ್ಟವಾಗಿಲ್ಲ.
ಇದರ ನಡುವೆ ಕರಾವಳಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೋಸ್ಟ್ಗಾರ್ಡ್ ಹೊಸ ಪೀಳಿಗೆಯ ಸ್ವದೇಶಿ ACVಗಳನ್ನೂ ಸೇರ್ಪಡೆಗೊಳಿಸುತ್ತಿದೆ. 2024ರಲ್ಲಿ ಆರು ACVಗಳ ನಿರ್ಮಾಣಕ್ಕಾಗಿ ₹387.44 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಗೋವಾದಲ್ಲಿಯೇ ಇವುಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹೀಗಾಗಿ ಕಾರವಾರದ ಕಡಲತೀರದಲ್ಲಿ ಕಾಣಿಸಿಕೊಂಡಿರುವ ಎರಡು ಹೋವರ್ಕ್ರಾಫ್ಟ್ಗಳು ಜನರ ಕುತೂಹಲಕ್ಕೆ ಕಾರಣವಾಗುವುದರ ಜತೆಗೆ ಕರಾವಳಿ ಭದ್ರತೆಯ ಮಹತ್ವವನ್ನೂ ಎತ್ತಿ ತೋರಿಸಿವೆ.
