ಶಿರಸಿ
ಗುತ್ತಿಗೆದಾರನ ಬಿಲ್ ನೀಡದಿರುವ ಬಗ್ಗೆ ನ್ಯಾಯಾಲಯದ ಆದೇಶದ ಅನ್ವಯ ಶಿರಸಿಯ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಪೀಠೋಪಕರಣ ಹಾಗೂ ಕಂಪ್ಯೂಟರ್, ಇನ್ನಿತರ ವಸ್ತುಗಳನ್ನು ಗುರುವಾರ ಜಪ್ತು ಮಾಡಲಾಗಿದೆ. ಈಗ ಕಚೇರಿಯ ಸಿಬ್ಬಂದಿ ನಿಂತೇ ಕೆಲಸ ಮಾಡಬೇಕಾಗಿದೆ.
ಬನವಾಸಿಯ ಹರ್ಡೇಕರ್ ಮಂಜಪ್ಪ ಸಭಾಭವನದ ನಿರ್ಮಾಣ ಹಾಗೂ ಮುಂದುವರಿದ ಕಾಮಗಾರಿಗಳ ಬಿಲ್ ಮೊತ್ತವನ್ನು ಶಿರಸಿಯ ಜಿ ಪಂ ಇಂಜಿನಿಯರಿಂಗ್ ಕಚೇರಿ ಗುತ್ತಿಗೆದಾರ ಎ ಜಿ ಭಟ್ ಎನ್ನುವವರಿಗೆ ಇಲಾಖೆ ಪಾವತಿಸಬೇಕಿತ್ತು. ೨೦೦೫ ರಲ್ಲಿಯೇ ಸಭಾಭವನ ಉದ್ಘಾಟಿಸಿದ್ದರೂ ಹಣ ಪಾವತಿಸಿರಲಿಲ್ಲ. ಇದರಿಂದಾಗಿ ಎಜಿ ಭಟ್ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ , ಗುತ್ತಿಗೆದಾರನಿಗೆ ಬರಬೇಕಿದ್ದ ಒಟ್ಟೂ ೨೧ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಲು ಅನುಮತಿ ನೀಡಿದೆ.
