ಕಾರವಾರ: ಗೋಕರ್ಣದಲ್ಲಿ ಪ್ರವಾಸಿ ಬೋಟ್ಗಳನ್ನು ನಡೆಸುವ ಸ್ಥಳೀಯ ಮೀನುಗಾರರಿಗೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡದೆ ಸತಾಯಿಸಲಾಗುತ್ತಿದೆ. ಎನ್ಒಸಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಒಂದು ವಾರದೊಳಗೆ ಬಾಕಿ ಇರುವ 20 ಬೋಟ್ಗಳಿಗೆ ಅನುಮತಿ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮೀನುಗಾರ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ ನಾಯಕ, ಗೋಕರ್ಣದ ಪ್ರವಾಸೋದ್ಯಮದಲ್ಲಿ ಸ್ಥಳೀಯ ಮೀನುಗಾರರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. 2002ರಿಂದ ಸಣ್ಣ ದೋಣಿಗಳ ಮೂಲಕ ಪ್ರವಾಸಿಗರಿಗೆ ಸೇವೆ ಒದಗಿಸುತ್ತಿದ್ದ ಮೀನುಗಾರರು, ನಂತರ ಬ್ಯಾಂಕ್ ಸಾಲ ಪಡೆದು, ಚಿನ್ನಾಭರಣಗಳನ್ನು ಅಡಮಾನವಿಟ್ಟು 15ರಿಂದ 30 ಲಕ್ಷ ರೂ.ವರೆಗೆ ಬಂಡವಾಳ ಹೂಡಿ ಸುಸಜ್ಜಿತ ಬೋಟ್ಗಳನ್ನು ಖರೀದಿಸಿದ್ದಾರೆ. 2010ರಿಂದ 2024ರವರೆಗೆ ಯಾವುದೇ ಸಮಸ್ಯೆಯಿಲ್ಲದೆ ಎನ್ಒಸಿ ದೊರೆಯುತ್ತಿತ್ತು. ಆದರೆ 2025ರಿಂದ ಹೊಸ ಟೆಂಡರ್ ಪ್ರಕ್ರಿಯೆಯ ನೆಪದಲ್ಲಿ ಸ್ಥಳೀಯರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಗೋಕರ್ಣದಲ್ಲಿ ಒಟ್ಟು 30 ಪ್ರವಾಸಿ ಬೋಟ್ಗಳಿದ್ದು, ಈ ಪೈಕಿ ಕೇವಲ 10 ಬೋಟ್ಗಳಿಗೆ ಮಾತ್ರ ಎನ್ಒಸಿ ನೀಡಲಾಗಿದೆ. ಉಳಿದ 20 ಬೋಟ್ಗಳಿಗೆ ಕಳೆದ ಒಂದು ವರ್ಷದಿಂದ ಅನುಮತಿ ನೀಡದೆ ಮೀನುಗಾರರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ದೂರಿದರು. ಎನ್ಒಸಿ ಕೊಡಿಸುವ ನೆಪದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಪ್ರವಾಸಿಗನಿಂದ 100 ರೂ.ನಂತೆ ದಿನಕ್ಕೆ 1ರಿಂದ 1.5 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಹಣ ನೀಡಿದವರಿಗೆ ಮಾತ್ರ ಅನುಮತಿ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಮಂಗಳಗೌರಿ ಅವರ ಕಾರ್ಯವೈಖರಿಯ ಬಗ್ಗೆಯೂ ಪ್ರದೀಪ ನಾಯಕ ಆಕ್ಷೇಪ ವ್ಯಕ್ತಪಡಿಸಿದರು. ಸ್ಥಳೀಯ ಮೀನುಗಾರರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ಹಿಂದೆ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಜಲಕ್ರೀಡೆಗಳ ಚಟುವಟಿಕೆಗಳಿಂದ ಮೀನುಗಾರಿಕೆಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ಬೋಟ್ಗಳ ಉದ್ಯಮ ಸ್ಥಳೀಯರಿಗೆ ಪರ್ಯಾಯ ಜೀವನಾಧಾರವಾಗಿದೆ. ಆದರೆ ಈಗ ಸ್ಥಳೀಯರನ್ನು ಕಡೆಗಣಿಸಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಶಿರಸಿಯ ಅಮೋಘ ಎಂಬ ವ್ಯಕ್ತಿಯಿಂದ ಹಣ ವಸೂಲಿ ನಡೆಯುತ್ತಿದೆ ಎಂಬ ಆರೋಪದ ಕುರಿತು ಜಿಲ್ಲಾಡಳಿತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮತ್ತೊಬ್ಬ ಮುಖಂಡ ಮಹೇಶ ಮಾತನಾಡಿ, ಸ್ಥಳೀಯ ಮೀನುಗಾರರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ. ಒಂದು ವಾರದೊಳಗೆ ಬಾಕಿ ಇರುವ 20 ಬೋಟ್ಗಳಿಗೆ ಎನ್ಒಸಿ ನೀಡದಿದ್ದರೆ ಸಂಬಂಧಪಟ್ಟ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಅಗತ್ಯಬಿದ್ದರೆ ಅರೆಬೆತ್ತಲೆ ಪ್ರತಿಭಟನೆ ಹಾಗೂ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೂ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಿವರಾಮ ಕಿಮಾಣಿ, ಗೋಪಾಲ, ನಾಗರಾಜ ನಾಯ್ಕ, ಗುಲಾಬಿ, ಸಂದೀಪ ಸೇರಿದಂತೆ ವಿವಿಧ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
