ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರಿಂದ ಉದ್ಘಾಟನೆ
ದಾಂಡೇಲಿ: ‘ಸಂವಿಧಾನ ಓದು ಅಭಿಯಾನ–ಕರ್ನಾಟಕ’ ಹಾಗೂ ದಾಂಡೇಲಿಯ ಸಮಾನಮನಸ್ಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ‘ಸಂವಿಧಾನ ಓದು–ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ’ ಕಾರ್ಯಕ್ರಮ ಅಕ್ಟೋಬರ್ 17 ಮತ್ತು 18ರಂದು ನಗರದ ಕರ್ನಾಟಕ ಸಂಘದ ಭವನದಲ್ಲಿ ನಡೆಯಲಿದೆ.
ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಗತಿಪರ ಆಶಯ ಹೊಂದಿರುವ ಸುಮಾರು 100 ಸಂಪನ್ಮೂಲ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಎರಡು ದಿನಗಳ ಸಂವಾದದಲ್ಲಿ ಸ್ವಾತಂತ್ರ್ಯ ಭಾರತದ ಆಶಯಗಳು, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜೆಗಳ ಹಕ್ಕುಗಳು ಮತ್ತು ಕರ್ತವ್ಯಗಳು ಸೇರಿದಂತೆ ಸಂವಿಧಾನದ ಮೂಲ ಆಶಯಗಳ ಕುರಿತು ಚರ್ಚೆ ನಡೆಯಲಿದೆ. ಪ್ರಸ್ತುತ ಸಂದರ್ಭದಲ್ಲಿ ಸಂವಿಧಾನದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಅಗತ್ಯತೆಯ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ.
ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ಮಾರ್ಗದರ್ಶನದಲ್ಲಿ 2018ರ ಆಗಸ್ಟ್ 25ರಂದು ಆರಂಭವಾದ ‘ಸಂವಿಧಾನ ಓದು ಅಭಿಯಾನ’ ರಾಜ್ಯಾದ್ಯಂತ ಸಂವಿಧಾನದ ಕುರಿತು ಜಾಗೃತಿ ಮೂಡಿಸುತ್ತಿದೆ.
ಪ್ರಜಾಪ್ರಭುತ್ವದ ಮೌಲ್ಯಗಳು, ನಾಗರಿಕರ ಹಕ್ಕುಗಳು ಹಾಗೂ ಸಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯ ಕುರಿತು ಪ್ರಸ್ತುತ ಎದುರಾಗಿರುವ ಸವಾಲುಗಳ ಬಗ್ಗೆಯೂ ಸಂವಾದದಲ್ಲಿ ಚರ್ಚಿಸಲಾಗುವುದು. ಅಂತಿಮವಾಗಿ ಸಂವಿಧಾನದ ಮೂಲ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮುಂದಿನ ಕಾರ್ಯಯೋಜನೆ ರೂಪಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಆದ ಕಾರಣ ಸಾರ್ವಜನಿಕರೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂವಿಧಾನ ಓದು ಅಭಿಯಾನ–ಕರ್ನಾಟಕ’ದ ಜಿಲ್ಲಾ ಮುಖಂಡರಾದ ಡಿ.ಸ್ಯಾಮಸನ್,ವಕೀಲರಾದ ಕೆ.ಎಚ ಪಾಟೀಲ,ರತ್ನದೀಪಾ ಎನ.ಎಮ,ಆಫ್ರೀನ ಕಿತ್ತೂರ ವಿನಂತಿಸಿದ್ದಾರೆ.
