ಕಾರವಾರ: ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಮನಸ್ಸಿನಲ್ಲಿಯೇ ಮುಚ್ಚಿಟ್ಟುಕೊಂಡು ಒತ್ತಡ ಹಾಗೂ ಖಿನ್ನತೆಗೆ ಒಳಗಾಗುವ ಬದಲು, ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಸ್ನೇಹಿತರೊಂದಿಗೆ ಮನಬಿಚ್ಚಿ ಮಾತನಾಡಿ ಅವರ ಸಲಹೆ ಪಡೆಯುವ ಮೂಲಕ ಅನೇಕ ಮಾನಸಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಎಸ್. ಉಂಡೋಡಿ ಹೇಳಿದರು.
ಅವರು ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಪೊಲೀಸ್ ಇಲಾಖೆ, ಕಾರಾಗೃಹ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೈನಂದಿನ ಜೀವನದಲ್ಲಿ ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳದೇ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಇತರರ ಜೀವನದೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದು, ತಮ್ಮ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಅರಿಯದೆ ಒತ್ತಡಕ್ಕೆ ಒಳಗಾಗುವುದು ಮತ್ತು ದುಶ್ಚಟಗಳಿಗೆ ಬಲಿಯಾಗುವುದು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಜೀವನದಲ್ಲಿ ಸಂತೋಷ ದಿಂದ ಇರಲು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಕುಟುಂಬದ ಸದಸ್ಯರು, ಸಂಬಧಿಕರು ಹಾಗೂ ಸ್ನೇಹಿತರೊಂದಿಗೆ ಪ್ರೀತಿ, ವಿಶ್ವಾಸ ಮತ್ತು ಸಂತೋಷ ದಿಂದ ಬೆರೆಯಬೇಕು. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ದಿನಚರಿ ರೂಪಿಸಿಕೊಳ್ಳಬೇಕು. ಕುಟುಂಬದ ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ, ನೆಮ್ಮದಿಯ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಶಂಕರ್ ರಾವ್ ಮಾತನಾಡಿ, ಸಂಪಾದನೆ, ಗೌರವ ಹಾಗೂ ಘನತೆಯ ಬೆನ್ನತ್ತುವ ಧಾವಂತದಲ್ಲಿ ಅನೇಕರು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯದಲ್ಲಿ ಏರುಪೇರಾದಾಗ ಎದುರಾಗಬಹುದಾದ ಸಮಸ್ಯೆಗಳನ್ನು ಅರಿತುಕೊಂಡು, ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು.
ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿಗೂ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಜೀವನದಲ್ಲಿ ಎದುರಾಗುವ ಒತ್ತಡಗಳನ್ನು ನಿಭಾಯಿಸುವುದು, ಸೋಲನ್ನು ಸ್ವೀಕರಿಸಿ ಅದನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವುದು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ನಟರಾಜ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಮೇಶ್ ರಾವ್, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಹರ್ಷ ವೆಂಕಟೇಶ್, ಮಾನಸಿಕ ರೋಗ ತಜ್ಞ ಡಾ. ಸುಹಾಸ್, ಡಿ.ಟಿ.ಸಿ. ಪ್ರಾಂಶುಪಾಲ ಡಾ. ಶಿವಾನಂದ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಕುರಿತ ಜಾಗೃತಿ ಕರಪತ್ರ ಬಿಡುಗಡೆ ಮಾಡಲಾಯಿತು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮಶೇಖರ ಮುತ್ನಾಳ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ ಎಸ್. ಕನ್ನಕ್ಕನವರ ನಿರೂಪಿಸಿ, ವಂದಿಸಿದರು.
