ರಾಜ್ಯೋತ್ಸವದ ಭಾಗವಾಗಿ ನವೆಂಬರ ತಿಂಗಳಿಡೀ ಸಾಹಿತ್ಯ ಪಯಣ
ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಿಡೀ ‘ಕನ್ನಡ ಕಾರ್ತಿಕ : ಅನುದಿನ – ಅನುಸ್ಪಂದನ’ ಶೀರ್ಷಿಕೆಯಡಿಯಲ್ಲಿ ಸರಣಿ ಸಾಹಿತ್ಯಿಕ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ 5 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಜೊತೆಗೆ ಪ್ರತಿ ವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ‘ಕನ್ನಡ ಕಾರ್ತಿಕ :ಅನುದಿನ- ಅನುಸ್ಪಂದನ’ ಶಿರ್ಷಿಕೆಯಡಿಯಲ್ಲಿ ಆಯಾ ತಾಲೂಕುಗಳ ಸಾರಥ್ಯದಲ್ಲಿ ತಿಂಗಳಿಡೀ ವೈಶಿಷ್ಠ್ಯಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗಿದೆ. ಅದು ಈ ವರ್ಷವೂ ಮುಂದುವರೆಯಲಿದೆ ಎಂದರು.
ನವೆಂಬರ 1 ರಂದು ಮುಂಜಾನೆ 8 ಗಂಟೆಗೆ ದಾಂಡೇಲಿಯ ಸಾಹಿತ್ಯ ಭವನದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ನಡೆಸಿ, ಸಾಯಂಕಾಲ ಸಾಹಿತ್ಯ ಭವನದಲ್ಲಿ ಕನ್ನಡ ಕಾರ್ತಿಕ ಸರಣಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ವಿಭಜಿತ ಕನ್ನಡ ನಾಡಿನಿಂದ ಅಖಂಡ ಕರ್ನಾಟದವರೆಗೆ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು ನ. 23ರವರೆಗೆ ಆಯಾ ತಾಲೂಕಿನಲ್ಲಿ ಕಾರ್ಯಕ್ರಮ ನಡೆಯಲಿದ್ದು ಕೊನೆಯ ದಿನ ನ.೨೩ ರಂದು ಸಂಜೆ 5:30 ಗಂಟೆಗೆ ದಾಂಡೇಯ ಸಾಹಿತ್ಯ ಭವನದಲ್ಲಿ ಕನ್ನಡ ಕಾರ್ತಿಕದ ಸಮಾರೋಪ ಹಾಗೂ ಸಾಹಿತ್ಯ ಸಂಭ್ರಮ ಅವಲೋಕನ ಕಾರ್ಯಕ್ರಮ ನಡೆಯಲಿದೆ.
ಪ್ರತಿ ತಾಲೂಕುಗಳಲ್ಲಿ ನಡೆಯುವ ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ, ಗೌರವ ಕಾರ್ದರ್ಶಿಗಳಾದ ಪಿ.ಆರ್. ನಾಯ್ಕ, ಜಾರ್ಜ್ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಹಾಗೂ ತಾಲೂಕು ಅಧ್ಯಕ್ಷರು ಮನವಿ ಮಾಡಿದ್ದಾರೆ.
