ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಕ್ಟೋಬರ್ 27 ರ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು ನೋಂದಣಿಯಾಗಿದ್ದು, 5,70,006 ಪುರುಷರು, 5,69,614 ಮಹಿಳೆಯರು ಹಾಗೂ ಮೂವರು ಇತರ ಲಿಂಗದ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1,523 ಮತಗಟ್ಟೆಗಳಿದ್ದು, ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 2,18,003 ಮತದಾರರಿದ್ದರೆ, ಕಾರವಾರ ಕ್ಷೇತ್ರದಲ್ಲಿ 2,01,469, ಶಿರಸಿ ಕ್ಷೇತ್ರದಲ್ಲಿ 1,95,044, ಕುಮಟಾ ಕ್ಷೇತ್ರದಲ್ಲಿ 1,79,114, ಹಳಿಯಾಳ ಕ್ಷೇತ್ರದಲ್ಲಿ 1,70,367 ಹಾಗೂ ಯಲ್ಲಾಪುರ ಕ್ಷೇತ್ರದಲ್ಲಿ 1,75,626 ಮತದಾರರು ನೋಂದಣಿಯಾಗಿದ್ದಾರೆ.
ಆಗಸ್ಟ್ 24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 11,23,022 ಮತದಾರರಿದ್ದರು. ಬಳಿಕ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಹಾಗೂ ತಿದ್ದುಪಡಿ ಪ್ರಕ್ರಿಯೆ ನಡೆಸಲಾಗಿದೆ. ಈ ಅವಧಿಯಲ್ಲಿ 19,268 ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದ್ದು, 2,667 ಹೆಸರುಗಳನ್ನು ಅಳಿಸಲಾಗಿದೆ. 15,361 ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಒಟ್ಟಾರೆ ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 16,601 ಮತದಾರರ ಹೆಚ್ಚಳವಾಗಿದೆ.
ವಿಧಾನಸಭಾ ಕ್ಷೇತ್ರವಾರು ಪರಿಶೀಲಿಸಿದಾಗ, ಭಟ್ಕಳದಲ್ಲಿ 4,321 ಮತದಾರರ ಹೆಚ್ಚಳವಾಗಿದ್ದು, ಇದು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಹೆಚ್ಚಳವಾಗಿದೆ. ಕಾರವಾರದಲ್ಲಿ 2,507, ಹಳಿಯಾಳದಲ್ಲಿ 2,600, ಯಲ್ಲಾಪುರದಲ್ಲಿ 2,200, ಶಿರಸಿಯಲ್ಲಿ 3,293 ಹಾಗೂ ಕುಮಟಾದಲ್ಲಿ 1,680 ಮತದಾರರ ನಿವ್ವಳ ಹೆಚ್ಚಳವಾಗಿದೆ.
ಮತದಾರರ ಪಟ್ಟಿಯಿಂದ ಒಟ್ಟು 2,667 ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಇದರಲ್ಲಿ 79 ಮಂದಿ ಮೃತಪಟ್ಟಿರುವುದು, ಇಬ್ಬರು ಗೈರುಹಾಜರಾಗಿರುವುದು, ಮೂವರು ಈಗಾಗಲೇ ಬೇರೆಡೆ ನೋಂದಣಿಯಾಗಿರುವುದು ಹಾಗೂ 2,008 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಕಾರಣವಾಗಿದೆ. 575 ಹೆಸರುಗಳನ್ನು ಇತರ ಕಾರಣಗಳಿಂದ ಅಳಿಸಲಾಗಿದೆ. ಕ್ಷೇತ್ರವಾರು ತೆಗೆದುಹಾಕುವಿಕೆಯಲ್ಲಿ, ಶಿರಸಿಯಲ್ಲಿ 630, ಭಟ್ಕಳದಲ್ಲಿ 526, ಕಾರವಾರದಲ್ಲಿ 453, ಹಳಿಯಾಳದಲ್ಲಿ 413, ಯಲ್ಲಾಪುರದಲ್ಲಿ 327 ಹಾಗೂ ಕುಮಟಾದಲ್ಲಿ 318 ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ.
ವಿಶೇಷ ತೀವ್ರ ಪರಿಷ್ಕ್ಕರಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 65,248 ನೋಟಿಸ್ಗಳನ್ನು ಸೃಜಿಸಿ, ಎಲ್ಲ ನೋಟಿಸ್ಗಳನ್ನು ಸಂಬAಧಪಟ್ಟವರಿಗೆ ತಲುಪಿಸಲಾಗಿದೆ. ಎಲ್ಲಾ ಪ್ರಕರಣಗಳ ವಿಚಾರಣೆಯನ್ನೂ ನಡೆಸಲಾಗಿದ್ದು, ವಿಚಾರಣೆಯ ಬಳಿಕ 64,673 ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲು ಪರಿಗಣಿಸಲಾಗಿದ್ದು, ಅನರ್ಹರೆಂದು ಗುರುತಿಸಲಾದ 575 ಮತದಾರರ ವಿರುದ್ಧ ಚುನಾವಣಾ ನೋಂದಣಾಧಿಕಾರಿಗಳಿAದ ನಮೂನೆ-7 ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳಗಿನ 17,569 ಯುವ ಮತದಾರರಿದ್ದಾರೆ. 15,561 ವಿಶೇಷ ಚೇತನ ಮತದಾರರು, 85 ವರ್ಷ ಮೇಲ್ಪಟ್ಟ 9,540 ಹಿರಿಯ ಮತದಾರರು ಹಾಗೂ 1,153 ಸೇವಾ ಮತದಾರರು ನೋಂದಣಿಯಾಗಿದ್ದಾರೆ ಎಂದರು. ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕ್ಕರಣೆ ಪ್ರಕ್ರಿಯೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು, ಮತಗಟ್ಟೆ ಅಧಿಕಾರಿಗಳು , ಬಿ.ಎಲ್.ಎ ಗಳು ಉತ್ತಮ ಸಹಕಾರವನ್ನು ನೀಡಿದ್ದು, ಜಿಲ್ಲಾಡಳಿತದಿಂದ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಗರಿಷ್ಠ ಎಚ್ಚರಿಕೆ ವಹಿಸಲಾಗಿದೆ. ಡಿಲೀಟ್ ಆಗಿರುವ ಎಲ್ಲಾ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ ಇತರೇ ಕಾರಣಗಳಿಂದ ತೆಗೆದುಹಾಕಿರುವವರ ಕುರಿತ ಸಂಪೂರ್ಣ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಡಲಾಗಿದೆ ಎಂದರು.
ಜಿ.ಜೆ.ಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳುಂಕೆ ಮಾತನಾಡಿ, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯಲ್ಲಿ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದ ಎಲ್ಲಾ ಅಧಿಕಾರಿಗಳು ಯಾವುದೇ ಗೊಂದಲಗಳಿಗೆ ಅಸ್ಪದ ನೀಡದೇ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯವನ್ನು ಮುಕ್ತಾಯಗೊಳಿಸಿದ್ದು, ರಾಜಕೀಯ ಪಕ್ಷಗಳಿಗೆ ಉತ್ತಮ ಸಹಕಾರವನ್ನು ನೀಡಿದ್ದಾರೆ. ಈ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗಳ ಶ್ರಮವನ್ನು ಪರಿಗಣಿಸಿ ಅವರಿಗೆ ನೀಡುವ ಗೌರವಧನದ ಮೊತ್ತವನ್ನು ಹೆಚ್ಚಳ ಮಾಡಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡುವಂತೆ ತಿಳಿಸಿದರು, ಸಿಪಿಐ (ಎಂ)ನ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ್ ಕೂಡ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಹೆಚ್ಚಿನ ಗೌರವಧನ ನೀಡುವಂತೆ ಕೇಂದ್ರ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲಗುಟ್ಕರ್, ಜೆಡಿಎಸ್ ಪಕ್ಷದ ವಕ್ತಾರ ಉದಯ ಭೋವಿ, ಚುನಾವಣಾ ಶಾಖೆಯ ತಹಸೀಲ್ದಾರ್ ಪಿ.ಡಿ ನಾಯ್ಕ, ಶಿರಸ್ತೇದಾರ್ ಶೇಖ್ ಮತ್ತಿತರರು ಇದ್ದರು.
