ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆಯು ನವೆಂಬರ್ 15 ರಂದು ಮುಂಜಾನೆ 11 ಗಂಟೆಗೆ ದಾಂಡೇಲಿಯ ಸಾಹಿತ್ಯ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು
ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಸಾಪ ಆಜೀವ ಸದಸ್ಯರ ಸಭೆಕರೆಯುವ ಹಾಗೂ ಆ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಮಂಡಿಸುವ ಹೊಸ ಪರಂಪರೆಗೆ ನಾಂದಿ
ಹಾಡಿರುವುದು ತಮಗೆಲ್ಲ ತಿಳಿದ ವಿಚಾರ. ನಮ್ಮ ಅವಧಿಯಲ್ಲಿ ಈಗಾಗಲೇ, ದಾಂಡೇಲಿ, ಹಳಿಯಾಳ, ಕಾರವಾರದಲ್ಲಿ ಕಸಾಪ ಆಜೀವ ಸದಸ್ಯರ ಸಭೆ ಆಯೋಜಿಸಿ ಆಯಾ ವರ್ಷದ ಲೆಕ್ಕಪತ್ರ ಮಂಡಿಸಲಾಗಿದೆ. ಈ ವಿಚಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ಕೂಡಾ ಪ್ರಶಂಸೆ ವ್ಯಕ್ತಪಡಿಸಿದೆ. ಸಾಹಿತ್ಯ ವಲಯವೂ
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾರದರ್ಶಕ ಆಡಳಿತದ ಬಗ್ಗೆ ಮೆಚ್ಚುಗೆಯ
ಮಾತುಗಳನ್ನಾಡುತ್ತಿದೆ. ನಮಗೂ ಸಹ ಸಾಹಿತ್ಯ ಸಮ್ಮೇಳನ ಹಾಗೂ ನಿರಂತರ ಕಾರ್ಯಕ್ರಮಗಳ
ಜೊತಗೆ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ನೀಡಿದ ಆತ್ಮತೃಪ್ತಿಯೂ ಇದೆ.
ಅಂತೆಯೇ ಈ ವರ್ಷ ಕೂಡಾ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ
ಸದಸ್ಯರ ಜಿಲ್ಲಾ ಮಟ್ಟದ ಸಭೆಯನ್ನು ದಾಂಡೇಲಿಯಲ್ಲಿ ಆಯೋಜಿಸಲಾಗಿದೆ. ಸಭೆಯಲ್ಲಿ ೨೦೨೫-೨೬ನೇ
ಸಾಲಿನಲ್ಲಿ ಕಸಾಪ ಉ.ಕ. ಜಿಲ್ಲಾ ಘಟಕಕ್ಕೆ ಬಂದಿರುವ ಒಟ್ಟೂ ಅನುದಾನ ಹಾಗೂ ಆಗಿರುವ ಒಟ್ಟೂ
ಖರ್ಚುಗಳ ವಿವರವನ್ನು ಮಂಡಿಸಲಾಗುವುದು.
ಇದರ ಜೊತೆಗೆ ದಾಂಡೇಲಿಯಲ್ಲಿ ಕಳೆದ ಡಿಸೆಂಬರನಲ್ಲಿ ನಡೆದ ಉತ್ತರಕನ್ನಡ ಜಿಲ್ಲಾ ೨೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರವನ್ನೂ ಕೂಡಾ ಪ್ರತ್ಯೇಕವಾಗಿ ಮಂಡಿಸಲಾಗುವುದು. ಹಾಗೂ ಸಂಘಟನೆಗೆ ಸಂಬಂಧಿಸಿ ಆಜೀವ ಸದಸ್ಯರಿಂದ ಸಲಹೆ-ಸೂಚನೆ ಪಡೆಯಲಾಗುವುದು. ಗೌರವಾನ್ವಿತ ಕಸಾಪ ಆಜೀವ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ
ಭಾಗವಹಿಸುವಂತೆ ಕಸಾಪ ಜಿಲ್ಲಾಧ್ಯಕ್ಷ
ಬಿ.ಎನ್. ವಾಸರೆ ಮನವಿ ಮಾಡಿದ್ದಾರೆ.
