ದಾಂಡೇಲಿ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ವೃದ್ಧಾಶ್ರಮಕ್ಕೆ ಹೊದಿಕೆ, ಹಣ್ಣು ವಿತರಣೆ
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ದಾಂಡೇಲಿ ಶಾಖೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಳಿಯಾಳ ಗ್ರಾಮದ ಶ್ರೀ ವೀರಭದ್ರ ಚಾರಿಟೇಬಲ್ ಟ್ರಸ್ಟ್ನ ನಗು ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹೊದಿಕೆ ಹಾಗೂ ಹಣ್ಣು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಭೋಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ದೇಮಾನಿ ಅವರು ಮಾತನಾಡಿ, ಗ್ರಾಮಗಳ ಹಿತದೃಷ್ಟಿಯಿಂದ ಯೋಜನೆಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಿಂದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಪ್ರಯೋಜನಗಳನ್ನು ವಿವರಿಸಿ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಊರಿನ ಗಣ್ಯರಾದ ಸಿರಾಜ್ ಮುನ್ನೋಳಿ ಅವರು ಮಾತನಾಡಿ, ಯೋಜನೆಯ ವತಿಯಿಂದ ಸಾಮಾಜಿಕ ಮತ್ತು ಸಮಾಜ ಕಲ್ಯಾಣದ ಉದ್ದೇಶದಿಂದ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಜನರಿಗೆ ಸಾಕಷ್ಟು ಅನುಕೂಲ ಕಲ್ಪಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಪೂಜ್ಯರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
ವೃದ್ಧಾಶ್ರಮದ ನಿರ್ವಹಣೆ ಮಾಡುತ್ತಿರುವ ವಿದ್ಯಾ ಅವರು ಮಾತನಾಡಿ, ಪೂಜ್ಯರ ಜನ್ಮದಿನದ ಪ್ರಯುಕ್ತ ವೃದ್ಧಾಶ್ರಮದ ಹಿರಿಯರಿಗೆ ಹೊದಿಕೆ ಹಾಗೂ ಹಣ್ಣುಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದ ಯೋಜನೆಯ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಪೂಜ್ಯರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಲಭಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ನಾರಾಯಣ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ಕಾಶಿನಾಥ, ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ, ರೇಣುಕಾ, ಕಾಮಿನಿ, ಸಚಿನ್, ವಲಯ ಮೇಲ್ವಿಚಾರಕ ಸಂದೀಪ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಮೋನಿಕಾ, ಸ್ಥಳೀಯ ಸೇವಾ ಪ್ರತಿನಿಧಿ ಅಕ್ಷತಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
