ಶಿರಸಿ:
ಬಹು ನಿರೀಕ್ಷಿತ ಶಿರಸಿ–ಹಾವೇರಿ ಹೆದ್ದಾರಿ ಕಾಮಗಾರಿ ವಿಳಂಬದ ಕುರಿತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಠಿಣ ನಿಲುವು ತಳೆದಿದ್ದಾರೆ. ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರು ಮತ್ತು ಸಂಬಂಧಿತ ಅಧಿಕಾರಿಗಳೇ ನೇರ ಹೊಣೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿ ನಿರ್ವಹಣೆಯಲ್ಲಿ ವಿಫಲವಾಗಿರುವುದರಿಂದ ಯೋಜನೆ ಹಿಂದುಳಿದಿದೆ ಎಂದು ಹೇಳಿದರು. “ಜನರಿಗೆ ತೀವ್ರ ಸಂಕಷ್ಟವಾಗುತ್ತಿರುವುದು ನಿಜ. ಈ ಸಮಸ್ಯೆಯನ್ನು ನಾನು ಒಪ್ಪಿಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ.
ಗುತ್ತಿಗೆದಾರರು ಎಚ್ಚರಿಕೆ ನೀಡಿದರೂ ನಿರ್ಲಕ್ಷ ತೋರಿದ್ದಾರೆ ಎಂದು ಆರೋಪಿಸಿದ ಕಾಗೇರಿ, NHAI ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ. “ಈಗಾಗಲೇ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದೇನೆ. ಮಳೆಗಾಲದೊಳಗೆ ಕನಿಷ್ಠ 8 ಕಿಮೀ ರಸ್ತೆ ಡಾಂಬರೀಕರಣ ಮಾಡಲೇಬೇಕು ಎಂದು ವಾರ್ನಿಂಗ್ ಕೊಟ್ಟಿದ್ದೇನೆ,” ಎಂದು ತಿಳಿಸಿದರು.
ಮಳೆಗಾಲದೊಳಗೆ ರಸ್ತೆ ಸರಿಪಡಿಸಿ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಮೇಲೂ ಕಾಗೇರಿ ವಾಗ್ದಾಳಿ ನಡೆಸಿದರು. “ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಆಗಿರುವ ಅಡಚಣೆಗಳನ್ನು ಈಗ ಹೇಳುವುದಿಲ್ಲ. ನೀವು ರಾಜ್ಯದ ಸಚಿವರು, ಕೇವಲ ಭಟ್ಕಳವನ್ನೇ ಗಮನಿಸುವುದಲ್ಲ, ಇಡೀ ರಾಜ್ಯದ ಕಡೆ ಗಮನ ಹರಿಸಿ. ನಿಮ್ಮ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸಿ ಮತ್ತು ಕೇಂದ್ರದ ಯೋಜನೆಗಳಿಗೆ ಸಹಕರಿಸಿ,” ಎಂದು ಹೇಳಿದರು.
“ಕೇವಲ ರಾಜಕೀಯ ಮಾಡಲು ಹೋಗಬೇಡಿ,” ಎಂದು ಸಚಿವ ವೈದ್ಯರಿಗೆ ಕಾಗೇರಿ ನೇರ ತಿರುಗೇಟು ನೀಡಿದರು.
ಒಟ್ಟಿನಲ್ಲಿ, ಶಿರಸಿ–ಹಾವೇರಿ ಹೆದ್ದಾರಿ ಕಾಮಗಾರಿ ವೇಗಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಂಸದರು ಸ್ಪಷ್ಟ ಸಂದೇಶ ನೀಡಿದ್ದಾರೆ.
