ಹಳಿಯಾಳ: ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಅಕ್ರಮ ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಿನಾಂಕ 04-05-2026 ರಂದು ಮಧ್ಯಾಹ್ನ 12:10 ಗಂಟೆಯ ಸುಮಾರಿಗೆ ಬೆಳವಟಗಿ ಗ್ರಾಮದ ಸರ್ಕಲ್ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತು, ಕರಿಯಪ್ಪ ದ್ಯಾಮಣ್ಣ ಬಸಪ್ಪನವರ (42) ಎಂಬಾತ ಅಕ್ರಮವಾಗಿ ಮಟ್ಕಾ ಜೂಜಾಟ ನಡೆಸುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತನು ಬರುವ-ಹೋಗುವ ಜನರನ್ನು ಕರೆದು, ಅಂಕಿ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟುವಂತೆ ಪ್ರಲೋಭನೆ ನೀಡುತ್ತಿದ್ದನು. “ಒಂದು ರೂಪಾಯಿಗೆ ಎಂಭತ್ತು ರೂಪಾಯಿ ನೀಡುತ್ತೇನೆ” ಎಂದು ಆಸೆ ಹುಟ್ಟಿಸಿ ಸಾರ್ವಜನಿಕರಿಂದ ಹಣ ಪಡೆದು ಚೀಟಿಗಳಲ್ಲಿ ಸಂಖ್ಯೆಗಳು ಬರೆದುಕೊಳ್ಳುತ್ತಿದ್ದನು ಎಂದು ಆರೋಪಿಸಲಾಗಿದೆ.
ಈ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಆರೋಪಿತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಈ ಜೂಜಾಟದಿಂದ ಬಂದ ಹಣವನ್ನು ಇಮ್ತಿಯಾಜ ಮಹಮದ್ ಯೂಸುಫ್ ಶಿರೋಳ (54) ಅವರಿಗೆ ನೀಡುವುದಾಗಿ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.
ದಾಳಿ ವೇಳೆ ಆರೋಪಿತನಿಂದ ₹410 ನಗದು, ಓಸಿ ನಂಬರ ಬರೆದ ಒಂದು ಚೀಟಿ ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಎನ್ಸಿ ನಂ. 24/2026 ದಾಖಲಿಸಿಕೊಂಡು, ಬಳಿಕ ನ್ಯಾಯಾಲಯದ ಅನುಮತಿ ಪಡೆದು ಗುನ್ನಾ ನಂ. 126/2026 ಅಡಿಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3) ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
