ಸಿದ್ದಾಪುರ:
ಕೆಎಸ್ಆರ್ಟಿಸಿ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ.
ಶಿರಸಿ ಮರಾಠಿಕೊಪ್ಪದ ಸಂದೀಪ ಲಕ್ಷ್ಮಣ ವಾಲ್ಮೀಕಿ, ಸೈಫ್ ಅಲಿ ಸಯ್ಯದ್ ಹಾಗೂ ಶಿರಸಿ ಮರಿಗುಡ್ಡೆಯ ಹರ್ಷವರ್ಧನ ಕೃಷ್ಣ ನಾಯ್ಕ ಬಂಧಿತರು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆ ನಡೆದ ಕೇವಲ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ:
ಅಕ್ಟೋಬರ್ 1ರಂದು ಶಿರಸಿ-ಸಿದ್ದಾಪುರ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚರಿಸುತ್ತಿತ್ತು. ಶಿರಸಿ ಕಾನಗೋಡಿನ ಭಾಸ್ಕರ ಮಂಜುನಾಥ ಪಟಗಾರ ಬಸ್ ಚಾಲಕರಾಗಿದ್ದು, ಗಣೇಶ ಉಪೇಂದ್ರ ನಾಯ್ಕ ನಿರ್ವಾಹಕರಾಗಿದ್ದರು.
ಇದೇ ವೇಳೆ ಸಂದೀಪ ವಾಲ್ಮೀಕಿ ಸೇರಿದಂತೆ ಮೂವರು ಓಮಿನಿಯಲ್ಲಿ ಬಂದು ಬಸ್ನ್ನು ಓವರ್ಟೇಕ್ ಮಾಡಲು ಮುಂದಾಗಿದ್ದಾರೆ. ಆದರೆ ಓವರ್ಟೇಕ್ಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಓಮಿನಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ಗೆ ಅಡ್ಡಗಟ್ಟಿದ್ದಾರೆ.
ಸಿದ್ದಾಪುರ ತಾಲೂಕಿನ ನಾಟಿಕಟ್ಟಾ ಬಳಿ ಪ್ರಯಾಣಿಕರು ಇಳಿಯುತ್ತಿದ್ದ ವೇಳೆ ಬಸ್ ನಿಂತಿದ್ದು, ಈ ವೇಳೆ ಮೂವರು ಬಸ್ನ ನಿರ್ವಾಹಕ ಗಣೇಶ ನಾಯ್ಕ ಅವರನ್ನು ಹೊರಗೆ ಎಳೆದು ಹಲ್ಲೆ ನಡೆಸಿದ್ದಾರೆ.
ಕಬ್ಬಿಣದ ಜಾಕ್ನಿಂದಲೂ ಹಲ್ಲೆ ನಡೆಸಲಾಗಿದ್ದು, ಚಾಲಕ ಭಾಸ್ಕರ ಪಟಗಾರ ಅವರ ಮೇಲೂ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಗೀತಾ ಪಾಟೀಲ್ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಜಿ. ಸೀತಾರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪಿಎಸ್ಐಗಳಾದ ನಾಗಪ್ಪ ಬಿ., ಶಾಂತಿನಾಥ ಪಾಸಾನೆ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಸಿದ್ದಾಪುರ ಪೊಲೀಸರ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಎಂ.ಎನ್. ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
