ಗೋಕರ್ಣ: ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿ ದಡ ಸೇರಲಾಗದೆ ಮುಳುಗುವ ಹಂತಕ್ಕೆ ತಲುಪಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರನ್ನು ಕೂಡ್ಲೆ ಬೀಚ್ನ ಜೀವ ರಕ್ಷಕ ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಬೆಂಗಳೂರಿನ ಹರಿಬಾಬು (30) ಹಾಗೂ ಶರವಾನ್ (30) ರಕ್ಷಿಸಲ್ಪಟ್ಟ ಪ್ರವಾಸಿಗರಾಗಿದ್ದಾರೆ. ಮೂವರು ಸ್ನೇಹಿತರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಏಕಾಏಕಿ ಸುಳಿಗೆ ಸಿಲುಕಿದ್ದಾರೆ. ಈ ವೇಳೆ ಹರಿಬಾಬು ಹಾಗೂ ಶರವಾನ್ ಅವರು ಸುಳಿಯ ಸೆಳೆತಕ್ಕೆ ಸಿಲುಕಿ ದಡದತ್ತ ಈಜಿಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗುವ ಸ್ಥಿತಿಗೆ ತಲುಪಿದ್ದರು.
ಪ್ರವಾಸಿಗರು ಅಪಾಯದಲ್ಲಿರುವುದನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ಮಂಜುನಾಥ ಹರಿಕಂತ್ರ ಹಾಗೂ ಜೆಸ್ಕಿ ಚಾಲಕ ಪ್ರಕಾಶ ಲಮಾಣಿ ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸಮುದ್ರಕ್ಕೆ ತೆರಳಿ ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದ್ದು, ಜೀವ ರಕ್ಷಕ ಸಿಬ್ಬಂದಿ ನಾಗೇಂದ್ರ ಕೂರ್ಲೆ ಹಾಗೂ ಪ್ರವಾಸಿ ಮಿತ್ರ ಸತೀಶ್ ನಾಯಕ್ ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದಾರೆ.
ಇದೇ ವೇಳೆ ಕೂಡ್ಲೆ ಬೀಚ್ನ ಮೈ ಸ್ಟಿಕ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ಸಿಬ್ಬಂದಿಯ ತ್ವರಿತ ಸ್ಪಂದನೆ ಹಾಗೂ ಸಮಯೋಚಿತ ಕಾರ್ಯಾಚರಣೆಯಿಂದ ಇಬ್ಬರು ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಪ್ರವಾಸಿಗರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
