ಜೋಯಿಡಾ: ತಾಲೂಕಿನ ಗಣೇಶಗುಡಿ ಮತ್ತು ಇಳವಾ ನಡುವೆ ಹರಿಯುವ ಕಾಳಿ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಪ್ರವಾಸಿಗರ ಭದ್ರತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸಿದೆ. ಐವರು ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮೊಸಳೆಯಿದ್ದ ದಿಕ್ಕಿನತ್ತಲೇ ಚಲಿಸಿದ ಆಘಾತಕಾರಿ ಘಟನೆ ಇತ್ತೀಚೆಗೆ ನಡೆದಿದೆ. ಸೇತುವೆ ಮೇಲಿದ್ದ ಸ್ಥಳೀಯರು ಕೂಗಿ ಎಚ್ಚರಿಸಿದರೂ ಆರಂಭದಲ್ಲಿ ನಿರ್ಲಕ್ಷ್ಯ ತೋರಿದ ದೋಣಿ ಚಾಲಕ, ಬಳಿಕ ಮೊಸಳೆಯ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿರುವುದನ್ನು ಗಮನಿಸಿ ಎಚ್ಚೆತ್ತು ದೋಣಿಯನ್ನು ಹಿಂದಕ್ಕೆ ತಿರುಗಿಸಿದ್ದಾನೆ. ಒಂದು ವೇಳೆ ಸಣ್ಣ ಎಡವಟ್ಟಾಗಿದ್ದರೂ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆಯಿತ್ತು.
ಕಾಳಿ ನದಿಯ ಈ ಭಾಗದಲ್ಲಿ ಮೊಸಳೆಗಳ ಹಾವಳಿ ವ್ಯಾಪಕವಾಗಿದ್ದರೂ, ದೂರದೂರುಗಳಿಂದ ಬರುವ ಪ್ರವಾಸಿಗರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ನದಿಗೆ ಇಳಿದು ಈಜುವುದು ಹಾಗೂ ಜಲಕ್ರೀಡೆಗಳಲ್ಲಿ ತೊಡಗುವುದು ಕಂಡುಬರುತ್ತಿದೆ. ಪ್ರಾಣಾಪಾಯದ ಅರಿವಿಲ್ಲದೆ ನೀರಿಗಿಳಿಯುವ ಇಂತಹ ಪ್ರವಾಸಿಗರ ವರ್ತನೆಗೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಪ್ರಾಣಹಾನಿಯಾಗುವುದು ನಿಶ್ಚಿತ. ಆದ್ದರಿಂದ ಸಂಬಂಧಪಟ್ಟ ಇಲಾಖೆಗಳು ಹಾಗೂ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಪ್ರವಾಸಿಗರು ನದಿಗಿಳಿಯದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ದಾಂಡೇಲಿಯಲ್ಲಿ ಅಳವಡಿಸಿರುವ ಮಾದರಿಯಲ್ಲೇ ಗಣೇಶಗುಡಿ ಹಾಗೂ ಇಳವಾ ಭಾಗದ ನದಿ ತೀರಗಳಲ್ಲೂ ಕಬ್ಬಿಣದ ತಂತಿ ಬೇಲಿಗಳನ್ನು ನಿರ್ಮಿಸಬೇಕು ಮತ್ತು ಅಪಾಯಕಾರಿ ಸ್ಥಳಗಳ ಬಗ್ಗೆ ಎಚ್ಚರಿಕೆ ನೀಡುವ ನಾಮಫಲಕಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದರ ಜೊತೆಗೆ, ಪ್ರವಾಸಿ ದೋಣಿಗಳ ಕಾರ್ಯಾಚರಣೆಯ ಬಗ್ಗೆ ತನಿಖೆ ನಡೆಸಿ, ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುವ ಇಂತಹ ನಿರ್ಲಕ್ಷ್ಯದ ದೋಣಿ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬುದು ಸ್ಥಳೀಯರ ಬಲವಾದ ಒತ್ತಾಯವಾಗಿದೆ.
