ಶಿರಸಿ ತಾಲೂಕಿನ ತಾರಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಾಶಿವಹಳ್ಳಿ ವಾರ್ಡ್ ನ ಬಾಳಗಾರ ಗೋಪಾಲಕೃಷ್ಣ ಹೆಗಡೆ ಅವರ ಮನೆಯಂಗಳದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಮನೆಯ ಬಾಗಿಲ ರಂಗೋಲಿಯ ಹಾಕುವ ಸ್ಥಳದಲ್ಲಿ ರಾಜಾರೋಷವಾಗಿ ಘನಗಾಂಭೀರ್ಯದಿಂದ ಓಡಾಡಿದೆ.
ಬುಧವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಬಾಳಗಾರ ಊರಿನ ಕಡೆಯ ಕಾಡಿನಿಂದ ಬಂದ ಈ ಚಿರತೆಯು ಗೋಪಾಲಕೃಷ್ಣ ಹೆಗಡೆ ಅವರ ಮನೆಯ ನಾಯಿ ಕಡೆ ಕಣ್ಣು ಹಾಕಿದೆ. ಆದರೆ ನಾಯಿ ಬೋನ್ ನಲ್ಲಿ ಇರುವ ಕಾರಣ ನಿರಾಶೆಯಿಂದ ಕಾಡಿನ ಕಡೆ ಸಾಗಿದೆ.
ಸುಮಾರು ಮೂರು ತಿಂಗಳಿಂದ ಚಿರತೆಯ ಓಡಾಟ ಈ ಭಾಗದಲ್ಲಿ ನಡೆದಿದೆ. ಈಗಾಗಲೇ ಆಕಳ ಕರು, ನಾಯಿಗಳು ಚಿರತೆಯ ಹೊಟ್ಟೆ ಸೇರಿದೆ.
ಚಿರತೆಯ ಕಾರಣದಿಂದ ಈ ಭಾಗದ ಜನರು ಸಾಯಂಕಾಲ 5 ಗಂಟೆ ನಂತರ ಓಡಾಡಲು ಹೆದರುತ್ತಿದ್ದಾರೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಜೋರಾಗಿದ್ದು ಬೆಳೆ ರಕ್ಷಣೆ ಮಾಡಿಕೊಳ್ಳಲು ಕಷ್ಟವಾಗುತ್ತಿದೆ. ಈಗ ಚಿರತೆಯೂ ಕಾಣಿಸಿಕೊಂಡಿದ್ದು ಮತ್ತಷ್ಟು ಭಯವಾಗಿದೆ. ಈ ಕುರಿತು ಅರಣ್ಯ ಇಲಾಖೆಯವರು ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದು ವಾಣಿ ಗೋಪಾಲ ಕೃಷ್ಣ ಹೆಗಡೆ ಅವರು ಈ ಮೂಲಕ ಅರಣ್ಯ ಇಲಾಖೆಯವರಲ್ಲಿ ವಿನಂತಿಸಿದ್ದಾರೆ.
