52 ಅಡಿ ಎತ್ತರದ ರಾವಣ, 48 ಅಡಿ ಎತ್ತರದ ಮೇಘನಾಥ ಮತ್ತು ಕುಂಭಕರ್ಣನ ಮೂರ್ತಿಗಳ ಆಕರ್ಷಣೆ
ದಾಂಡೇಲಿ: ನಗರದ ಪ್ರಸಿದ್ಧ ಶ್ರೀ ದಾಂಡೇಲಪ್ಪ ಜಾತ್ರೆಯ ಅಂಗವಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಲ್ಲಿ ಅ.20ರಂದು ಅದ್ಧೂರಿ ರಾ ಮಲೀಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದರು.
ನಗರದ ಡಿಲಕ್ಸ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6.30ರಿಂದ ರಾತ್ರಿ 8ರವರೆಗೆ ಬಂಗೂರನಗರದ ಡಿಲಕ್ಸ್ ಮೈದಾನದಲ್ಲಿ ರಾಮಲೀಲೋತ್ಸವ ನಡೆಯಲಿದೆ. ಈ ಬಾರಿ 52 ಅಡಿ ಎತ್ತರದ ರಾವಣ ಹಾಗೂ 48 ಅಡಿ ಎತ್ತರದ ಮೇಘನಾಥ ಮತ್ತು ಕುಂಭಕರ್ಣನ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಅಗ್ನಿಶಾಮಕ ವಾಹನ, ಆಂಬುಲೆನ್ಸ್, ವೈದ್ಯರು ಹಾಗೂ ದಾದಿಯರ ವ್ಯವಸ್ಥೆ ಮಾಡಲಾಗಿದೆ. ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಂಚಾರ ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆ:
ಡಿವೈಎಸ್ಪಿ ಬಿ. ಗಿರೀಶ್ ಮಾತನಾಡಿ, ಶ್ರೀ ದಾಂಡೇಲಪ್ಪ ಜಾತ್ರೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಾತ್ರೆಯ ಮುನ್ನಾದಿನ ಸಂಜೆ 6 ಗಂಟೆಯಿಂದ ಜಾತ್ರೆ ಮುಗಿಯುವವರೆಗೆ ದಾಂಡೇಲಿಯಿಂದ ಹಳಿಯಾಳಕ್ಕೆ ಹಾಗೂ ಹಳಿಯಾಳದಿಂದ ದಾಂಡೇಲಿಗೆ ಸಂಚರಿಸುವ ಬಸ್ಗಳು ಮತ್ತು ಇತರ ವಾಹನಗಳಿಗೆ ಕರ್ಕಾ–ಬರ್ಚಿನಾಕಾ, ಬಂಬೂಗೇಟ್ ಹಾಗೂ ಸೋಮಾನಿ ವೃತ್ತದ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ದ್ವಿಚಕ್ರ ವಾಹನಗಳ ಪಾರ್ಕಿಂಗ್ಗೆ ನಗರದ ಕನ್ಯಾ ವಿದ್ಯಾಲಯದಲ್ಲಿ ಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ಗೆ ಜನತಾ ವಿದ್ಯಾಲಯದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಟೋ ರಿಕ್ಷಾಗಳು ಹಳಿಯಾಳ ರಸ್ತೆಯ ಮೂರನೇ ಗೇಟ್ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ ಎಂದರು.
ಸಿಸಿ ಕ್ಯಾಮೆರಾ ಅಳವಡಿಕೆ
ಪಿಎಸ್ಐ ಅಮೀನ ಅತ್ತಾರ ಮಾತನಾಡಿ, ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)ಯನ್ನು ಕಾಗದ ಕಾರ್ಖಾನೆ ಹಾಗೂ ದಾಂಡೇಲಪ್ಪ ಜಾತ್ರಾ ಸಮಿತಿಗೆ ನೀಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಮಾನಿಟರ್ಗಳನ್ನು ಅಳವಡಿಸಲಾಗಿದ್ದು, ಭದ್ರತೆಗಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಮಲೀಲೋತ್ಸವ ಸುಗಮವಾಗಿ ನಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಶಿವಾನಂದ ಅಂಬಿಗೇರ, ಪಿಎಸ್ಐ ಶಿವಾನಂದ ನಾವದಗಿ, ಪಿಎಸ್ಐ ಮಂಜುಳಾ ರಾವೋಜಿ, ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ., ಭದ್ರತಾ ಅಧಿಕಾರಿಗಳಾದ ಕುಶಾಲಪ್ಪ ಹಾಗೂ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು.
