ದಾಂಡೇಲಿ: ಕನ್ನಡ ಸಾಹಿತ್ಯ ಲೋಕದಲ್ಲಿ ವಚನಕಾರರು ಹೊಸ ಮನ್ವಂತರವನ್ನು ಸೃಷ್ಟಿಸಿದವರು. ಕನ್ನಡವನ್ನು ಸಂಸ್ಕೃತಮಯ ಮತ್ತು ಛಂದಸ್ಸಿನ ಕಟ್ಟಳೆಗಳಿಂದ ಬಿಡುಗಡೆಗೊಳಿಸಿದವರು. ಕನ್ನಡವನ್ನು ವಿಶ್ವಮಟ್ಟಕ್ಕೆ ಏರಿಸಿದವರು ಎಂದು ಅಧ್ಯಾಕ, ಲೇಖಕ ಕಾಳಿದಾಸ ಬಡಿಗೇರ ನುಡಿದರು.
ಅವರು ದಾಂಡೇಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ‘ಅನುಭವದಿಂದ ಅರಿವಿನೆಡೆಗೆ’ ವಚನಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾಡುತ್ತಿದ್ದರು.
ವಚನ ಸಾಹಿತ್ಯದ 25000 ಕ್ಕಿಂತಲೂ ಹೆಚ್ಚಿನ ವಚನಗಳು ಕನ್ನಡ ಸಾಹಿತ್ಯವನ್ನು ಅಲಂಕರಿಸಿವೆ. ವಚನ ಸಾಹಿತ್ಯವು ಹಿಂದೂ ಧರ್ಮದ ಶುದ್ಧೀಕರಣ ಕಾರ್ಯವನ್ನು ಕೈಗೊಂಡಿದೆ. ಪ್ರಜಾಪ್ರಭುತ್ವ ಸಿದ್ಧಾಂತ, ಜೀವನದರ್ಶನ, ಮಹಿಳಾ ಸ್ವಾತಂತ್ರ್ಯ, ಮಾನವೀಯ ಮೌಲ್ಯಗಳಿಗೆ ವಚನ ಸಾಹಿತ್ಯವು ಅಡಿಪಾಯವನ್ನು ಹಾಕಿಕೊಟ್ಟಿದೆ. ಸಾಹಿತ್ಯದ ರಚನೆ ಕೇವಲ ದೇವರನ್ನು ರಾಜನನ್ನು ಮೆಚ್ಚಿಸಲು ಅಲ್ಲ. ಜನರನ್ನು ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಉದ್ಧಾರ ಮಾಡುವುದೇ ಸಾಹಿತ್ಯದ ಉದ್ದೇಶ ಎಂದು ವಚನಕಾರರು ತೋರಿಸಿಕೊಟ್ಟಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ನಗರಸಭೆಯ ಮಾಜಿ ಅಧ್ಯಕ್ಷೆ ಸರಸ್ವತಿ ರಜಪೂತ, ಸಮಾಜ ಸೇವಕಿ ಶ್ರೀನಿಧಿ ಪ್ರಸನ್ನ ಅಣ್ವೇಕರ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಎಮ್.ಆರ್. ನಾಯಕ, ಮಾನವ ಹಕ್ಕುಗಳ ಸಂಘಟನೆಯ ನಿರ್ದೇಶಕ ಫಿರೋಜ ಪೀರ್ಜಾದೆ ಸಾಂದರ್ಭಿಕವಾಗಿ ಮಾತನಾಡಿದರು.
ಕಸಾಪ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಸಾಪ ಸದಸ್ಯ ಸುರೇಶ ಪಾಲನಕರ ಸ್ವಾಗತಿಸಿದರು. ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಪ್ರವೀಣ ನಾಯ್ಕ ವಂದಿಸಿದರು. ಜಲಜಾ ವಾಸರೆ ನಿರೂಇಸಿದರು. ವಿದ್ಯಾರ್ಥಿಗಳು ವಚನ ಗಾಯನ ಮಾಡಿದರು.
