ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಗಳಾಗಿ ಜವಾಬ್ದಾರಿ ನಿಭಾಯಿಸಿದ್ದ ಯಲ್ಲಾಪುರದ ಹೋಲಿ ರೋಸರಿ ಶಾಲೆ ಶಿಕ್ಷಕರು ಸೋಮವಾರ ವಿದ್ಯುನ್ಮಾನ ಮಾಧ್ಯಮದ ಮೂಲಕ ಶಾಲಾ ಸಂಸತ್ ಚುನಾವಣೆ ನಡೆಸಿದ್ದಾರೆ. ಎಲ್ಲಿಯೂ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಮುನ್ನಚ್ಚರಿಕೆವಹಿಸಿ ಮಕ್ಕಳಿಗೆ ಮತದಾನದ ಮಹತ್ವದ ಪಾಠ ಮಾಡಿದ್ದಾರೆ.
ಹೋಲಿ ರೋಸರಿ ಶಾಲೆಯ ಶಿಕ್ಷಕ ಎಂ ರಾಜಶೇಖರ್ ಅವರು ಎರಡು ವಿಧಾನಸಭಾ ಚುನಾವಣೆಯಲ್ಲಿ ರಿಟನಿಂಗ್ ಆಫಿಸರ್ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕ ಚಂದ್ರಶೇಖರ್ ಅವರು ಚುನಾವಣಾ ಅಧಿಕಾರಿಯಾಗಿ ಅನುಭವಗಳಿಸಿದ್ದಾರೆ. ಇದರೊಂದಿಗೆ ಶಾಲೆಯ ಮುಖ್ಯಾಧ್ಯಾಪಕ ಫಾದರ್ ರೆಮಂಡ್ ಫರ್ನಾಂಡಿಸ್, ಶಿಕ್ಷಕರಾದ ದೀಪಾ ಇಟ್ಟಿ ಮಲ್ಲಿಕಾರ್ಜುನ್ ಹೆಗ್ಗೆರೆ, ವೆಂಕಟರಮಣ ಭಟ್ ಸಹ ಸಾರ್ವಜನಿಕ ಚುನಾವಣೆಯಲ್ಲಿ ವಿವಿಧ ಪಾತ್ರ ನಿಭಾಯಿಸಿದ್ದಾರೆ. ತಮ್ಮ ಅನುಭವದ ಆಧಾರದಲ್ಲಿ ಈ ಎಲ್ಲ ಶಿಕ್ಷಕರು ಈ ದಿನ ವಿದ್ಯುನ್ಮಾನ ಮಾಧ್ಯಮ ಬಳಸಿ ಶಾಲೆಯಲ್ಲಿ ಮತದಾನ ಪ್ರಕ್ರಿಯೆ ನಡೆಸಿದರು.
ಶಾಲಾ ಮುಖ್ಯಾಧ್ಯಾಪಕ ಫಾದರ್ ರೆಮಂಡ್ ಫರ್ನಾಂಡಿಸ್ ಮುಖ್ಯ ಚುನಾವಣಾಧಿಕಾರಿಯಾಗಿದ್ದರು. ಸಾರ್ವಜನಿಕ ಚುನಾವಣೆ ಮಾದರಿಯಲ್ಲಿಯೇ ಅವರು ನೀತಿಸಂಹಿತೆ ಘೋಷಣೆ ಮಾಡಿದರು. ಉಳಿದ ಶಿಕ್ಷಕರು ಚುನಾವಣಾಧಿಕಾರಿಗಳಾಗಿ ಪ್ರಚಾರದ ಬಗ್ಗೆ ಕಣ್ಣಿಟ್ಟಿದ್ದರು. ಆಮೀಷ ಒಡ್ಡದಿರುವ ಬಗ್ಗೆ ಮೊದಲೇ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದರು. ಅತ್ಯಂತ ಸ್ಪರ್ಧಾತ್ಮಕ ಮನೋಭಾವನೆಯಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ತಾಕೀತು ಮಾಡಿದ್ದರು. ಸದೃಢ ಸರ್ಕಾರ ರಚನೆ, ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಶಿಕ್ಷಕ ಚಂದ್ರಶೇಖರ್ ಅವರು ವಿವರಿಸಿದ್ದು, ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದರು.
ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ ಸೇರಿ ಎಲ್ಲಾ ವಿಧಾನಗಳು ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ನಡೆದವು. ಮತದಾನದ ವೇಳೆ ಶಾಲೆಯ ಪ್ರಧಾನಿ ಸ್ಥಾನಕ್ಕೆ ಮೊಬೈಲ್ ಆಫ್ ಬಳಸಿ ಮತದಾನ ನಡೆಸಲಾಯಿತು. ಉಪಪ್ರಧಾನಿ ಹುದ್ದೆಗೆ ಬಾಲೆಟ್ ಪೆಪೆರ್ ಬಳಕೆ ನಡೆಯಿತು. ಮತಗಟ್ಟೆ ಅಧಿಕಾರಿಗಳಾಗಿ ದೀಪಾ ಇಟ್ಟಿ, ಮಲ್ಲಿಕಾರ್ಜುನ್ ಹೆಗ್ಗೆರೆ, ವೆಂಕಟರಮಣ ಭಟ್ ಕೆಲಸ ಮಾಡಿದರು. ಮತದಾನದ ಎಲ್ಲ ಪ್ರಕ್ರಿಯೆಗಳನ್ನು ಎಂ ರಾಜಶೇಖರ್ ನಿರ್ವಹಿಸಿದರು. ಈ ವರ್ಷ ಪ್ರವೇಶಪಡೆದ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಕೊನೆಗೆ ಮತದಾನ ಫಲಿತಾಂಶ ಪ್ರಕಟವಾಗಿದ್ದು, ಪ್ರಧಾನಿ ಹುದ್ದೆಗೆ ಐಶ್ವರ್ಯ ನಾಯ್ಕ ಅದ್ಧೂರಿ ಮತಗಳ ಅಂತರದಿAದ ಆಯ್ಕೆಯಾದರು. ಉಪಪ್ರಧಾನಿ ಹುದ್ದೆಗೆ ಅಭಿಷೇಕ ನಾಯ್ಕ ಚುನಾಯಿತರಾದರು. ಈ ಹಿಂದೆಯೂ ಒಮ್ಮೆ ಇಲ್ಲಿನ ಶಿಕ್ಷಕರು ನಿಜವಾದ ವೋಟಿಂಗ್ ಮಿಶನ್ ತಂದು ಚುನಾವಣೆ ನಡೆಸಿದ್ದರು.
