ಶಿರಸಿಯ ಮರಾಠಿಕೊಪ್ಪದಲ್ಲಿ ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದಿದ್ದು, ಶಾಸಕ ಭೀಮಣ್ಣ ನಾಯ್ಕ ಹಾಗೂ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆ ಸ್ಥಳಕ್ಕೆ ಪ್ರತ್ಯೇಕ ಭೇಟಿ ನಡೆಸಿದ್ದಾರೆ. ಸಂತ್ರಸ್ತರಿಗೆ ಆ ಇಬ್ಬರು ನಾಯಕರು ಸಾಂತ್ವಾನ ಹೇಳಿ ಸಹಾಯ ಮಾಡಿದ್ದಾರೆ.
ರಾಧಾ ನಾಯ್ಕ ಅವರನ್ನು ಭೇಟಿ ಮಾಡಿದ ಶಾಸಕ ಭೀಮಣ್ಣ ನಾಯ್ಕ ಅವರು ಸರ್ಕಾರದಿಂದ 1 ಲಕ್ಷ ರೂ ಪರಿಹಾರ ಒದಗಿಸುವ ಭರವಸೆ ನೀಡಿದರು. ಅದರೊಂದಿಗೆ ವೈಯಕ್ತಿಯವಾಗಿ ಹಣಕಾಸಿನ ಸಹಾಯ ಮಾಡಿದರು. `ಮಳೆ ಮುಗಿಯುವವರೆಗೆ ಬೇರೆ ಕಡೆ ಮನೆ ಮಾಡಿ. ಮಳೆ ಮುಗಿದ ನಂತರ ಸರ್ಕಾರದಿಂದ ನೆರವು ಕೊಡಿಸುವೆ’ ಎಂದು ಭೀಮಣ್ಣ ನಾಯ್ಕ ವಾಗ್ದಾನ ಮಾಡಿದರು. ಶಾಸಕರ ಜೊತೆ ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಶೀಲ್ದಾರ್ ರಮೇಶ ಹೆಗಡೆ ಹಾಗೂ ಇನ್ನಿತರ ಅಧಿಕಾರಿಗಳಿದ್ದರು.
ಸೋಮವಾರ ಬೆಳಗ್ಗೆಯೇ ಸ್ಥಳಕ್ಕೆ ಭೇಟಿ ನೀಡಿದ್ದ ಅನಂತಮೂರ್ತಿ ಹೆಗಡೆ ಸರ್ಕಾರದ ನಿಲುವು ಖಂಡಿಸಿದರು. `ಮನೆ ಮುರಿದು ಬೀಳುವ ಸ್ಥಿತಿಯಲ್ಲಿದ್ದರೂ ಸರ್ಕಾರ ನೆರವಿಗೆ ಬಂದಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಸಂತ್ರಸ್ತರಿಗೆ ಸರ್ಕಾರ ತಕ್ಷಣ ಪರಿಹಾರಕೊಡಬೇಕು’ ಎಂದು ಆಗ್ರಹಿಸಿದ ಅವರು ವೈಯಕ್ತಿಕವಾಗಿ ಸಹಾಯ ಮಾಡಿದರು. ಅನಂತಮೂರ್ತಿ ಹೆಗಡೆ ಅವರ ಜೊತೆ ಬಿಜೆಪಿಯ ಇನ್ನಿತರ ನಾಯಕರಿದ್ದರು.
ಈ ಇಬ್ಬರು ನಾಯಕರು ಮುಚ್ಚಿದ ಲಕೋಟೆಯಲ್ಲಿ ವೈಯಕ್ತಿಕವಾಗಿ ನೆರವು ನೀಡಿದ್ದು, ನೆರವು ನೀಡಿದ ಮೊತ್ತವನ್ನು ಎಲ್ಲಿಯೂ ಬಹಿರಂಗಪಡಿಲ್ಲ.
