ಮುಂಡಗೋಡದಲ್ಲಿ ಸುರಿದ ಮಳೆ ಅನೇಕ ಮನೆಗಳಿಗೆ ಹಾನಿ ಮಾಡಿದೆ. ಜೊತೆಗೆ ಬೆಳೆಗಳನ್ನು ನಾಶ ಮಾಡಿದೆ. ಈ ಹಿನ್ನಲೆ ಸೋಮವಾರ ಸೋಮವಾರ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯವರು ಪರಿಹಾರಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
`ವ್ಯಾಪಕ ಮಳೆಯಿಂದ ಅಡಿಕೆ ಬೆಳೆಗೆ ಕೊಳೆ ಬಂದಿದೆ. ಅಡಿಕೆ ಉದುರಿದ್ದರಿಂದ ರೈತರು ಸಮಸ್ಯೆಯಲ್ಲಿದ್ದಾರೆ. ಹೀಗಾಗಿ ಒಂದು ಎಕರೆಗೆ 50 ಸಾವಿರ ರೂ ಬೆಳೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು. `ಅಡಿಕೆ ಜೊತೆ ಗೋವಿನ ಜೋಳವೂ ಹಾಳಾಗಿದೆ. ಗೋವಿನ ಜೋಳ ಬೆಳೆಗಾರರಿಗೆ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು’ ಎಂದು ಹೋರಾಟಗಾರ ಚಿದಾನಂದ ಹರಿಜನ ಆಗ್ರಹಿಸಿದರು.
`ಮಳೆಯಿಂದ ರಸ್ತೆಗೆ ಗುಂಡಿ ಬಿದ್ದಿದೆ. ರೈತರ ಬೆಳೆ ಹಾನಿಯಾಗಿದೆ. ಮನೆಗಳು ಮುರಿದು ಬಿದ್ದಿವೆ. ಈ ಎಲ್ಲದರ ಬಗ್ಗೆ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಒದಗಿಸಬೇಕು’ ಎಂದು ಹೋರಾಟಗಾರ ಚಿದಾನಂದ ಹರಿಜನ ಆಗ್ರಹಿಸಿದರು.
`ರಸ್ತೆ ಹಾಳಾಗಿದ್ದರಿಂದ ಅಪಘಾತ ನಡೆಯುತ್ತಿದ್ದು, ಅಲ್ಲಿನ ಗುಂಡಿ ಮುಚ್ಚಬೇಕು. ಅಪಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ಸಿಗಬೇಕು’ ಎಂದು ಮನವಿ ಸಲ್ಲಿಸಿದರು. ಮುಂಡಗೋಡ ತಹಶೀಲ್ದಾರ್ ಶಂಕರ ಗೌಡಿ ಮನವಿ ಪಡೆದರು. ಸಂಘಟನೆ ಉಪಾಧ್ಯಕ್ಷರಾದ ಭೀಮಸಿ ವಾಲ್ಮೀಕಿ, ರಾಜ್ಯ ಜಂಟಿ ಕಾರ್ಯದರ್ಶಿ ಗೋವಿಂದ ಬೆಂಡ್ಲಗಟ್ಟಿ, ರಾಜ್ಯ ಸಹ ಕಾರ್ಯದರ್ಶಿ ಎಸ್ ಎಸ್ ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಾರ್ಟಿನ್ ಬಳ್ಳಾರಿ, ತಾಲೂಕಾ ಅಧ್ಯಕ್ಷ ಖೇಮಣ್ಣ ಲಮಾಣಿ, ರೈತ ಮುಖಂಡ ನಾಗರಾಜ ಬೆಣ್ಣಿ ಮುಂತಾದವರಿದ್ದರು.
