ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ಸಂಚರಿಸುತ್ತಿದ್ದ ಸಿಗರೇಟಿನ ಲಾರಿ ಕದ್ದು ಅದನ್ನು ಸುಟ್ಟು ಹಾಕಿದ್ದ ಕಿಡಿಗೇಡಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
2013ರಲ್ಲಿ ಅರಬೈಲ್ ಘಟ್ಟದಲ್ಲಿ ಲಾರಿ ಕಳ್ಳತನ ನಡೆದಿತ್ತು. ಸಿಗರೇಟು ಸಾಗಿಸುತ್ತಿದ್ದ ಲಾರಿಯನ್ನು ನಾಲ್ವರು ಸೇರಿ ಅಪಹರಿಸಿದ್ದರು. ಸಿಗರೇಟನ್ನು ಮಾರಾಟ ಮಾಡಿ ಆ ಲಾರಿಯನ್ನು ಸುಟ್ಟು ಸಾಕ್ಷಿ ನಾಶ ಮಾಡಿದ್ದರು.
ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅವರೆಲ್ಲರೂ ಜಾಮೀನುಪಡೆದು ಊರಿಗೆ ಹೋಗಿದ್ದರು. ಆದರೆ, ರಾಜೇಂದ್ರ ಸಿಂಗ ಎಂಬಾತ ಈವರೆಗೂ ಪೊಲೀಸರಿಗೆ ಸಿಕ್ಕಿರಲಿಲ್ಲ. ನ್ಯಾಯಾಲಯಕ್ಕೆ ಸಹ ಹಾಜರಾಗಿರಲಿಲ್ಲ. ಜಾಮೀನು ಸಹ ಪಡೆದಿರಲಿಲ್ಲ.
70 ವರ್ಷದ ರಾಜೇಂದ್ರ ಸಿಂಗ ಗುಜರಾತಿನ ಗೋದ್ರಾದಲ್ಲಿ ಅಡಗಿದ್ದು, ಪಿಎಸ್ಐ ಸಿದ್ದು ಗುಡಿ ಆತನನ್ನು ಹುಡುಕಿ ಅಲ್ಲಿಗೆ ಹೋದರು. ಪೊಲೀಸ್ ಸಿಬ್ಬಂದಿ ಶಫೀ ಶೇಖ ಹಾಗೂ ಗಿರೀಶ ಲಮಾಣಿ ಚಾಣಾಕ್ಷತನದಿಂದ ಆತನನ್ನು ಪತ್ತೆ ಮಾಡಿದರು.
ಆರೋಪಿಯೇ ಮರೆತಿದ್ದ ಸಿಗರೇಟಿನ ಲಾರಿ ಸುಟ್ಟಿದ್ದ ಪ್ರಕರಣವನ್ನು 12 ವರ್ಷದ ನಂತರ ನೆನಪಿಸಿ ಅಲ್ಲಿಯೇ ರಾಜೇಂದ್ರ ಸಿಂಗ್’ನನ್ನು ವಶಕ್ಕೆಪಡೆದರು. ಸದ್ಯ ಆತನನ್ನು ಯಲ್ಲಾಪುರಕ್ಕೆ ಕರೆತರಲಾಗಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
