ಶಿರಸಿ-ಕುಮಟಾ ಹೆದ್ದಾರಿ ಅಗಲೀಕರಣ ಗುತ್ತಿಗೆಪಡೆದ ಆರ್ಎನ್ಎಸ್ ಇನ್ಪಾಸ್ಟೆಕ್ಚರ್ ಕಂಪನಿ ರಸ್ತೆಗೆ ಹೆದ್ದಾರಿ ಪ್ರಾಧಿಕಾರದ ಮಧ್ಯಸ್ಥಿಕೆ ಮೂಲಕ ಅಗತ್ಯವಿರುವ ಜಾಗವನ್ನು ಅರಣ್ಯ ಇಲಾಖೆಯಿಂದ ಪಡೆದಿದೆ. ಆದರೆ, ರಸ್ತೆ ಅಂಚಿನಲ್ಲಿ ಬಸ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗಪಡೆಯಲು ಇದೀಗ ಅಡ್ಡದಾರಿ ಹಿಡಿದಿದೆ!
ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಜಾಗವನ್ನು ನಿಯಮಾನುಸಾರವೇ ಪಡೆಯಲಾಗಿದೆ. ಸ್ವಾಧೀನಕ್ಕೆಪಡೆದ ಭೂಮಿಗೆ ಪರ್ಯಾಯ ಭೂಮಿ ನೀಡುವುದರ ಜೊತೆ ಅಲ್ಲಿ ನಾಶವಾದ ಮರಗಳ ಬದಲು ಪರ್ಯಾಯ ಗಿಡ ನೆಡುವ ಒಪ್ಪಂದವೂ ನಡೆದಿದೆ. ಈ ಎಲ್ಲಾ ಷರತ್ತು ಒಪ್ಪಿದ ನಂತರ ಅರಣ್ಯ ಇಲಾಖೆ ರಸ್ತೆ ಅಗಲೀಕರಣಕ್ಕೆ ಅನುಮತಿ ನೀಡಿದ್ದು, ಅಗಲೀಕರಣ ಕೆಲಸವೂ ನಡೆಯುತ್ತಿದೆ. ಆದರೆ, ಬಸ್ ನಿಲ್ದಾಣ ನಿರ್ಮಾಣಕ್ಕೆ ಇದೀಗ ಸೂಕ್ತ ಜಾಗ ಇಲ್ಲ!
ರಸ್ತೆ ಅಗಲೀಕರಣಕ್ಕಾಗಿ ಅರಣ್ಯ ಇಲಾಖೆಯ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಅವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅಗತ್ಯವಿರುವ ಹೆಚ್ಚುವರಿ ಜಾಗವನ್ನು ಗುತ್ತಿಗೆ ಕಂಪನಿ ಪಡೆದಿಲ್ಲ. ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಜಾಗ ಕೊಡಿಸುವುದು ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿ ಆಗಿದ್ದರೂ ಆ ಬಗ್ಗೆ ಪ್ರಾಧಿಕಾರದವರು ತಲೆಕೆಡಿಸಿಕೊಂಡಿಲ್ಲ. ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಜಾಗವನ್ನು ಸ್ವೀಕರಿಸಿದಲ್ಲಿ `ಅದಕ್ಕೆ ಮತ್ತಷ್ಟು ಹಣ ಕಟ್ಟಬೇಕು. ಇನ್ನಷ್ಟು ಗಿಡ ನೆಡಬೇಕು. ಜೊತೆಗೆ ಪರ್ಯಾಯ ಭೂಮಿಯನ್ನು ಕೊಡಬೇಕು’ ಎಂದು ಅರಿವಿರುವ ಅಧಿಕಾರಿಗಳು ಇಲ್ಲಿ ತಮ್ಮ ಕಂಜೂಸ್ ಬುದ್ದಿ ಪ್ರದರ್ಶಿಸಿದ್ದಾರೆ. ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿರುವ ಈ ಅವಧಿಯಲ್ಲಿ `ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಜಾಗ ಕೊಡಿ’ ಆರ್ಎನ್ಎಸ್ ಇನ್ಪಾಸ್ಟೆಕ್ಚರ್ ಕಂಪನಿ ಅಧಿಕಾರಿಗಳು ವಿವಿಧ ಗ್ರಾ ಪಂ ಅಧ್ಯಕ್ಷರು ಹಾಗೂ ಪಿಡಿಓಗಳಿಗೆ ಪತ್ರ ಬರೆದಿದ್ದಾರೆ.
ಆ ಪತ್ರದಲ್ಲಿ ಸ್ಪಷ್ಟವಾಗಿ `ಸಂಬoಧಿಸಿದವರ ಒಪ್ಪಿಗೆಪಡೆದು ಅನುಮತಿಕೊಡಿ’ ಎಂದು ಸೂಚಿಸಲಾಗಿದೆ. ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರಸ್ತೆ ಗಡಿಗೆ ಹೊಂದಿಕೊoಡು ಜಾಗ ಅಗತ್ಯವಿದ್ದು, ಸಂಬoಧಿಸಿದವರ ಒಪ್ಪಿಗೆ ಎಂದರೆ ಆ ಜಾಗದ ಒಡೆತನದವರ ಒಪ್ಪಿಗೆ ಕಡ್ಡಾಯ. ಈಗಾಗಲೇ ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಶೇ 84ರಷ್ಟು ಜಾಗ ಅರಣ್ಯ ಇಲಾಖೆಯಿಂದಪಡೆದಿದ್ದಾಗಿದ್ದು, ಸದ್ಯ ಬಸ್ ನಿಲ್ದಾಣಕ್ಕೆ ಅಗತ್ಯವಿರುವ ಜಾಗವೂ ಅರಣ್ಯ ಇಲಾಖೆಗೆ ಒಳಪಡುತ್ತದೆ. ಆದರೆ, ಬಸ್ ನಿಲ್ದಾಣ ನಿರ್ಮಾಣಕ್ಕೆ ಅರಣ್ಯ ಇಲಾಖೆ ಜಾಗ ನೀಡುವ ಸಾಧ್ಯತೆ ಕಡಿಮೆ. ಅದಾಗಿಯೂ ಬಸ್ ನಿಲ್ದಾಣ ಅಗತ್ಯವಿರುವ ಕಾರಣ ಗ್ರಾಮ ಪಂಚಾಯತದವರು ತಮ್ಮದಲ್ಲದ ಜಾಗವನ್ನು ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ಗುತ್ತಗೆ ಕಂಪನಿಗೆ ಕೊಡುತ್ತಿದ್ದಾರೆ.
ಶಿರಸಿಯ 9 ಗ್ರಾಮ ಪಂಚಾಯತ ಕಚೇರಿಗೆ ಈಗಾಗಲೇ ಆರ್ಎನ್ಎಸ್ ಇನ್ಪಾಸ್ಟೆಕ್ಚರ್ ಕಂಪನಿಯ ಪತ್ರ ತಲುಪಿದೆ. ಆದರೆ, ಗ್ರಾಮ ಪಂಚಾಯತದವರು ಜಾಗ ನೀಡುವ ಮೊದಲು `ಸಂಬAಧಿಸಿದವರ ಒಪ್ಪಿಗೆ’ ಪಡೆದಿಲ್ಲ. ಹೀಗಾಗಿ ಪಂಚಾಯತದವರು ಠರಾವು ಮಾಡಿ ಜಾಗ ಕೊಟ್ಟಿದ್ದರೂ ಅದಕ್ಕೆ ಕಾನೂನು ಮಾನ್ಯತೆ ಇಲ್ಲ. `ಶಿರಸಿ-ಕುಮಟಾ ರಸ್ತೆಯಲ್ಲಿ ಈಗಾಗಲೇ ಇದ್ದ ಹಳೆ ಬಸ್ ನಿಲ್ದಾಣ ಶಿಥಿಲಗೊಂಡಿದ್ದು, ಅಭಿವೃದ್ಧಿ ಕೆಲಸಗಳಿಗಾಗಿ ಅವನ್ನು ಒಡೆಯಲಾಗಿದೆ. ಅದೇ ಸ್ಥಳದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಿದರೆ ಯಾವುದೇ ಸಮಸ್ಯೆ ಇಲ್ಲ’ ಎಂಬುದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಅವರ ಅಭಿಪ್ರಾಯ. `ಅರಣ್ಯ ಪ್ರದೇಶವನ್ನು ಬೇರೆಯವರ ಬಳಕೆಗೆ ಕೊಡಬೇಕು ಎಂದರೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ. ಗುತ್ತಿಗೆದಾರರ ಪತ್ರಕ್ಕೆ ಗ್ರಾಮ ಪಂಚಾಯತದವರು ಜಾಗ ಕೊಡುವುದು ಕಾನೂನುಬಾಹಿರ’ ಎಂಬುದು ನ್ಯಾಯವಾದಿ ರವೀಂದ್ರ ನಾಯ್ಕ ಅವರ ಅಭಿಮತ.
`ಸಾಕಷ್ಟು ಸವಾಲುಗಳನ್ನು ಎದುರಿಸಿ ಹೆದ್ದಾರಿ ಅಗಲೀಕರಣ ಪ್ರಕ್ರಿಯೆ ನಡೆದಿದೆ. ಮೊದಲಿದ್ದ ಹೆದ್ದಾರಿ ಸಹ ಅರಣ್ಯ ಇಲಾಖೆ ಜಾಗದಲ್ಲಿದ್ದು, ಅದಕ್ಕೂ ಕಂಪನಿ ಅನುಮತಿಪಡೆದು ಅಭಿವೃದ್ಧಿ ಮಾಡುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ಗುತ್ತಿಗೆ ಕಂಪನಿಯ ಹೊಣೆ ಅಲ್ಲ. ಅದಾಗಿಯೂ, ಸಣ್ಣ-ಪುಟ್ಟ ಕಾರಣ ನೀಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ತಡೆತಂದರೆ ಅದರಿಂದ ಜನರಿಗೆ ಸಮಸ್ಯೆ’ ಎಂಬುದು ಆರ್ಎನ್ಎಸ್ ಇನ್ಪಾಸ್ಟೆಕ್ಚರ್ ಕಂಪನಿ ಅಧಿಕಾರಿಗಳ ಮಾತು.
